ಬೆಂಗಳೂರು[ಆ.14]: ಬೆಂಗಳೂರು ನಗರದ ಕುಡಿಯುವ ನೀರಿನ ಪ್ರಮುಖ ಜಲಮೂಲವಾದ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯ ಬಹುತೇಕ ಭರ್ತಿ ಆಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ದೂರವಾಗಿದೆ.

ಕಳೆದ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಮಳೆ ಕೊರತೆಯಿಂದ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಇದರಿಂದ ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಆತಂಕ ಎದುರಾಗಿತ್ತು. ಇದೀಗ ನಿರೀಕ್ಷೆಗೂ ಮೀರಿ ಭಾರೀ ಪ್ರಮಾಣದ ಮಳೆಯಾಗಿದ್ದು, ಜಲಾಶಯ ಬಹುತೇಕ ಭರ್ತಿಯಾಗಿದೆ. ಹಾಗಾಗಿ ನೀರಿನ ಕೊರತೆಯ ಆತಂಕ ದೂರಾಗಿದೆ. ಕಾವೇರಿ ನೀರು ಪೂರೈಕೆ ಎಂದಿನಂತೆ ಮುಂದುವರಿಯಲಿದೆ ಎಂದು ಜಲಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಸಿ.ಗಂಗಾಧರ್‌ ತಿಳಿಸಿದರು.

ಬೆಂಗಳೂರು ನಗರಕ್ಕೆ ಕುಡಿಯುವ ಉದ್ದೇಶಕ್ಕೆ ಕಾವೇರಿ ಜಲಾನಯನ ಪ್ರದೇಶದಿಂದ ವಾರ್ಷಿಕ 19 ಟಿಎಂಸಿ ನೀರು ನಿಗದಿಗೊಳಿಸಲಾಗಿದೆ. ಅದರಂತೆ ಜಲಮಂಡಳಿಯು ದಿನಕ್ಕೆ ಗರಿಷ್ಠ 1450 ದಶ ಲಕ್ಷ ಲೀಟರ್‌ನಂತೆ ಪ್ರತಿ ತಿಂಗಳು 1.5 ಟಿಎಂಸಿ ನೀರು ಪೂರೈಸುತ್ತಿದೆ. ಈಗ ಜಲಾಶಯ ಭರ್ತಿ ಆಗಿರುವುದರಿಂದ ರಾಜಧಾನಿಗೆ ನಿಗದಿತ ನೀರು ಲಭ್ಯವಾಗಲಿದೆ.

ಕೆಆರ್‌ಎಸ್‌ ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 124.80 ಅಡಿ. ಪ್ರಸ್ತುತ ಜಲಾಶಯದಲ್ಲಿ 123.70 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 1.10 ಅಡಿ ಮಾತ್ರ ನೀರಿನ ಅಗತ್ಯವಿದೆ. ಕೊಡಗು ಭಾಗದಲ್ಲಿ ಮಳೆ ಮುಂದುವರಿದಿದೆ, ಹೀಗಾಗಿ ಮಂಗಳವಾರವೇ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಜಲಾಶಯಕ್ಕೆ 90,318 ಕ್ಯೂಸೆಕ್‌ ನೀರಿನ ಒಳಹರಿವಿದ್ದು, 68210 ಕ್ಯೂಸೆಕ್‌ ಹೊರಹರಿವಿದೆ.