ತೆಲಂಗಾಣದ ವಾದಕ್ಕೆ ಯಾವುದೇ ಪುರಸ್ಕಾರ ದೊರಕಿಲ್ಲ. ರಾಜ್ಯದ ವಿಭಜನೆಯಾದಂತೆ ಆಂಧ್ರದೊಂದಿಗೆ ನೀವೇ ನೇರವಾಗಿ ಹಂಚಿಕೊಳ್ಳಿ ಎಂದು ತೆಲಂಗಾಣಕ್ಕೆ ಸೂಚಿಸಲಾಗಿದೆ.

ನವದೆಹಲಿ(ಅ. 19): ಕಾವೇರಿ ನದಿ ನೀರು ವಿಚಾರದಲ್ಲಿ ಕೋರ್ಟ್'ನಿಂದ ಪದೇಪದೇ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಕೃಷ್ಣ ನದಿ ವಿಚಾರದಲ್ಲಿ ಸಮಾಧಾನಕರ ತೀರ್ಪು ಸಿಕ್ಕಿದೆ. ಕೃಷ್ಣ ನೀರಿನ ಪಾಲು ಬಿಟ್ಟುಕೊಡಬೇಕಾದ ಅಪಾಯದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಪಾರಾಗಿವೆ. ಕೃಷ್ಣ ನದಿ ನೀರಿನಲ್ಲಿ ತಮಗೆ ಪ್ರತ್ಯೇಕ ಪಾಲು ಬೇಕೆಂದು ತೆಲಂಗಾಣ ಮಾಡಿಕೊಂಡ ಮನವಿಗೆ ನ್ಯಾ| ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧಿಕರಣವು ಮನ್ನಣೆ ನೀಡಲು ನಿರಾಕರಿಸಿದೆ. 2013ರ ಆದೇಶದ ಯಥಾಸ್ಥಿತಿ ಪಾಲಿಸುವಂತೆ ಕೃಷ್ಣ ನ್ಯಾಯಾಧಿಕರಣವು ಸೂಚಿಸಿದೆ. 2013ರಲ್ಲಿ ಆಂಧ್ರಕ್ಕೆ ಸಿಕ್ಕ ಪಾಲಿನಲ್ಲೇ ನೀರು ಹಂಚಿಕೊಳ್ಳುವಂತೆ ತೆಲಂಗಾಣಕ್ಕೆ ಆದೇಶಿಸಿದೆ.

ತೆಲಂಗಾಣದ ಪ್ರತ್ಯೇಕ ರಾಜ್ಯ ರಚನೆಯಾದ ಹಿನ್ನೆಲೆಯಲ್ಲಿ ಕೃಷ್ಣ ನದಿ ನೀರನ್ನು ನಾಲ್ಕು ರಾಜ್ಯಗಳ ನಡುವೆ ಹಂಚಿಕೆಯಾಗಬೇಕೆಂದು ವಾದಿಸಿ ತೆಲಂಗಾಣವು ಕೃಷ್ಣ ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಆದರೆ, ತೆಲಂಗಾಣದ ವಾದಕ್ಕೆ ಯಾವುದೇ ಪುರಸ್ಕಾರ ದೊರಕಿಲ್ಲ. ರಾಜ್ಯದ ವಿಭಜನೆಯಾದಂತೆ ಆಂಧ್ರದೊಂದಿಗೆ ನೀವೇ ನೇರವಾಗಿ ಹಂಚಿಕೊಳ್ಳಿ ಎಂದು ತೆಲಂಗಾಣಕ್ಕೆ ಸೂಚಿಸಲಾಗಿದೆ.

2013ರ ತೀರ್ಪಿನ ಪ್ರಕಾರ ಕೃಷ್ಣ ನದಿ ನೀರು ಹಂಚಿಕೆ ಹೇಗೆ?
ಕರ್ನಾಟಕದ ಪಾಲು: 907 ಟಿಎಂಸಿ
ಮಹಾರಾಷ್ಟ್ರದ ಪಾಲು: 666 ಟಿಎಂಸಿ
ಆಂಧ್ರದ ಪಾಲು: 1005 ಟಿಎಂಸಿ