ಕೆಪಿಜೆಪಿ ಪ್ರಣಾಳಿಕೆ, 24 ಅಭ್ಯರ್ಥಿ ಪಟ್ಟಿ ಪ್ರಕಟ

First Published 16, Mar 2018, 9:08 AM IST
KPJP Candidate List Release
Highlights

ಚಿತ್ರನಟ ಉಪೇಂದ್ರ ಅವರು ನಿರ್ಗಮಿಸಿದ ಬೆನ್ನಲ್ಲೇ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಸಂಸ್ಥಾಪಕ ಮಹೇಶ್‌ಗೌಡ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು : ಚಿತ್ರನಟ ಉಪೇಂದ್ರ ಅವರು ನಿರ್ಗಮಿಸಿದ ಬೆನ್ನಲ್ಲೇ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಸಂಸ್ಥಾಪಕ ಮಹೇಶ್‌ಗೌಡ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಅಲ್ಲದೆ, 24 ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಲಾಗಿದೆ.

ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಮಹೇಶ್‌ಗೌಡ, ರಾಜ್ಯದಲ್ಲಿ ಶಿಕ್ಷಣ, ಕೃಷಿ, ಕೈಗಾರಿಕೆ, ಮಹಿಳಾ ಸಬಲೀಕರಣ, ಸರ್ವರಿಗೂ ಸಮಪಾಲು ಕುರಿತಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರಣಾಳಿಕೆ ಅನ್ವಯ ಸರ್ವರಿಗೂ ಸಮಪಾಲು ಸಮಬಾಳು ತತ್ವದಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ, ಇಂಗ್ಲಿಷ್‌ ಬೋಧನೆ ಆರಂಭಿಸುವುದು, ಹೋಬಳಿ ಮಟ್ಟದಲ್ಲಿ ಆದರ್ಶ ಶಾಲೆಗಳ ಸ್ಥಾಪನೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಉತ್ತಮ ಗ್ರಂಥಾಲಯ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಧುನೀಕರಣ, ಹೋಬಳಿ ಮಟ್ಟದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 25 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ, ಮಹಿಳೆಯರಿಗೆ ಉಚಿತವಾಗಿ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್‌ ವಿತರಣೆ, ಜಿಲ್ಲಾ ಮಟ್ಟದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಪ್ರತಿ ಹಳ್ಳಿಗೆ ಸಂಚಾರಿ ಆಸ್ಪತ್ರೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಗ್ರಾಮೀಣ ಪ್ರದೇಶದಲ್ಲಿ 12 ಗಂಟೆ ನಿರಂತರ 3 ಫೇಸ್‌ ವಿದ್ಯುತ್‌ ಪೂರೈಕೆ, ಸೌರಶಕ್ತಿ ಸೌಲಭ್ಯ, ರೈತರ ಎಲ್ಲ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಹಾಗೂ ಹಣಕಾಸಿನ ನೆರವು, ರಾಷ್ಟ್ರೀಯ ವ್ಯವಸಾಯ ಜಾಗೃತ ದಿನದಂದು ರೈತರಿಗೆ ಸಹಾಯ ಧನ, ರಾಜ್ಯದ ಜಲಸಂಪನ್ಮೂಲ ಆಧರಿಸಿ ನೀರಾವರಿ ಯೋಜನೆ ಜಾರಿ ಸೇರಿದಂತೆ ಒಟ್ಟು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 33 ಅಂಶಗಳನ್ನು ಒಳಗೊಂಡಿದೆ.

loader