ಬೆಂಗಳೂರು[ಜು.19]: ಕಳೆದೆರಡು ವಾರದಿಂದ ನಡೆಯುತ್ತಿರುವ ರಾಜಕೀಯ ಪ್ರಹಸನ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ದೋಸ್ತಿ ನಾಯಕರು ವಿಶ್ವಾಸಮತ ಯಾಚನೆಗೆ ವಿಳಂಬ ಮಾಡುತ್ತಿದ್ದರೆ, ಇತ್ತ ಬಿಜಪಿ ನಾಯಕರು ಸದನದಲ್ಲಿ ಅಹೋ ರಾತ್ರಿ ನಡೆಸುತ್ತಿದ್ದಾರೆ. ಅತ್ತ ಅತೃಪ್ತ ಶಾಸಕರು ಏನೇ ಆದರೂ ನಿರ್ಧಾರ ಬದಲಾಯಿಸುವ ಮಾತೇ ಇಲ್ಲ ಎಂದು ಮುಂಬೈ ಹೋಟೇಲ್ ನಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ನಿರ್ಮಾಣವಾದ ಇಂತಹ ಪರಿಸ್ಥಿತಿಗೆ ಬಿಜೆಪಿಯೇ ಕಾರಣ ಎಂಬುವುದು ದೋಸ್ತಿ ನಾಯಕರ ಆರೋಪ.

ಸದ್ಯ ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಆಪರೇಷನ್ ಕಮಲವನ್ನು ಉಲ್ಲೇಖಿಸಿರುವ ಖಂಡ್ರೆ 'ಆಪರೇಷನ್ ಕಮಲ ರಾಜ್ಯಕ್ಕೆ ಶಾಪವಾಗಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡಿದೆ. ಮೈತ್ರಿ ಸರ್ಕಾರ ಪತನಗೊಳಿಸಲು ಶಾಸಕರಿಗೆ ಬೆದರಿಕೆ, ಆಮಿಷ ನೀಡಿದ್ದಾರೆ' ಎಂದ ಆರೋಪಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂಬೈನಿಂದ ಮರಳಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತ ಶಾಸಕರ ಕುರಿತಾಗಿ ಪ್ರತಿಕ್ರಿಯಿಸಿದ ಖಂಡ್ರೆ 'ಇಡಿ, ಸಿಬಿಐ ಮುಂದಿಟ್ಟುಕೊಂಡು ಶಾಸಕರನ್ನು ಹೆದರಿಸಲಾಗುತ್ತಿದೆ. ಇದೇ ಕಾರಣದಿಂದ ಅವರು ಮರಳಿ ಬರುತ್ತಿಲ್ಲ' ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯಪಾಲರ ನಡೆಯನ್ನು ಖಂಡಿಸಿರುವ ಖಂಡ್ರೆ 'ಬಿಜೆಪಿಯಿಂದ ರಾಜ್ಯಪಾಲರ ಸಾಂವಿಧಾನಿಕ ಹುದ್ದೆ ದುರ್ಬಳಕೆಯಾಗುತ್ತಿದೆ. ರಾಜ್ಯಪಾಲರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.