Asianet Suvarna News Asianet Suvarna News

ಕೆಪಿಸಿಸಿ ಅಧ್ಯಕ್ಷ ಗಾದಿ: ಯಾರ ವಾದ ಏನು?

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಹಲವು ಪ್ರಶ್ನೆ ಗಳಿಗೆ ಉತ್ತರ ಕಂಡುಕೊಳ್ಳಲು ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ನಗರಕ್ಕೆ ಆಗಮಿಸುತ್ತಿದ್ದಾರೆ. ಆದರೆ, ರಾಜ್ಯ ನಾಯಕರಲ್ಲಿ ಈ ಬಗ್ಗೆ ಹಲವು ವಾದಗಳಿವೆ.

KPCC Presidentship  Who Says What
  • Facebook
  • Twitter
  • Whatsapp

ಪರಮೇಶ್ವರ್‌ ಬಣ
ಆದರೆ, ಪರಮೇಶ್ವರ್‌ ಪರ ಬಣವು ಹಾಲಿ ಅಧ್ಯಕ್ಷರನ್ನೇ ಮುಂದುವರೆಸಬೇಕು. ಏಕೆಂದರೆ, ಕಳೆದ ಆರು ವರ್ಷದಿಂದ ಪಕ್ಷವನ್ನು ಉತ್ತಮವಾಗಿ ಮುನ್ನೆಡೆಸಿ ಕೊಂಡು ಬಂದಿದ್ದಾರೆ. ಚುನಾವಣೆಯ ಈ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿದರೆ ಹೊಸ ಅಧ್ಯಕ್ಷರಿಗೆ ವ್ಯವಸ್ಥೆಗೆ ಹೊಂದಿ ಕೊಳ್ಳುವುದು ಕಷ್ಟ. ಚುನಾವಣಾ ಸಾಮಿಪ್ಯದಿಂದಾಗಿ ಈ ರಿಸ್ಕ್‌ ಬೇಡ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಪರ ದಲಿತರು ಗಟ್ಟಿಯಾಗಿ ನಿಂತಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ದಲಿತರಿಗೆ ಯಾವ ಉನ್ನತ ಹುದ್ದೆ ನೀಡದೇ ಹಾಲಿ ಹುದ್ದೆಯಲ್ಲಿರುವ ದಲಿತರನ್ನು ಕೆಪಿಸಿಸಿ ಅಧ್ಯಕ್ಷ್ಯ ಸ್ಥಾನದಿಂದ ತೆಗೆದರೆ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ವಾದ ಮಂಡಿಸುತ್ತದೆ. ಈ ವಾದಕ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಸಹಮತವೂ ಇದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಬಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ಗುಂಪು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಡೆಯಲೇ ಬೇಕು. ಏಕೆಂದರೆ, ಹಾಲಿ ಅಧ್ಯಕ್ಷರು ಸಚಿವ ಸಂಪುಟದ ಸದಸ್ಯರೂ ಆಗಿದ್ದಾರೆ. ಅಲ್ಲದೆ, ಆರು ವರ್ಷಗಳ ಕಾಲ ಈ ಹುದ್ದೆ ನಿಭಾಯಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸರ್ಕಾರದೊಂದಿಗೆ ಸಾಮರಸ್ಯ ದಿಂದ ಸಾಗುವಂತಹ ನೂತನ ಅಧ್ಯಕ್ಷರ ಅಗತ್ಯವಿದೆ ಎಂದು ವಾದ ಹೊಂದಿದೆ.
ಯಾವ ಸಮುದಾಯಕ್ಕೆ ನೀಡಬೇಕು ಎಂಬ ಪ್ರಶ್ನೆಗೆ - ಉತ್ತರ ಕರ್ನಾಟಕ ಭಾಗದ ಲಿಂಗಾಯತರಿಗೆ ನೀಡಬೇಕು ಎಂಬುದು ಸಿಎಂ ಬಣದ ವಾದ. ಏಕೆಂದರೆ, ದಲಿತರು, ಹಿಂದುಳಿದವರು ಈಗಾಗಲೇ ಕಾಂಗ್ರೆಸ್‌ ಪರ ನಿಂತಿದ್ದಾರೆ. ಒಕ್ಕಲಿಗರು ಜೆಡಿಎಸ್‌ಜತೆ ಗುರುತಿಸಿಕೊಂಡಿದ್ದಾರೆ. ಅಲ್ಲಿ ಮತ ಕೀಳುವುದು ಕಷ್ಟು. ಆದರೆ, ಬಿಜೆಪಿ ಪರ ಲಿಂಗಾಯತರು ಸಂಪೂರ್ಣವಾಗಿ ನಿಂತಿಲ್ಲ. ಇದು ಉಪ ಚುನಾವಣೆಯಲ್ಲಿ ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತರಿಗೆ ನೀಡಿದರೆ ಲಿಂಗಾಯತ ಮತಗಳಿಗೂ ಕಾಂಗ್ರೆಸ್‌ ಲಗ್ಗೆ ಹಾಕಬಹುದು ಎಂಬುದು ಸಿಎಂ ಬಣದ ವಾದ ಮತ್ತು ಯಾರು ಈ ಹುದ್ದೆಗೆ ಬರಬೇಕು ಎಂದರೇ ಇರುವ ಹೆಸರು ಒಂದೇ ಎಸ್‌.ಆರ್‌. ಪಾಟೀಲ್‌.

ಮುನಿಯಪ್ಪ ಬಣ
ಇದೇ ವಾದವನ್ನು ಮುಂದಿಟ್ಟುಕೊಂಡು ಕೆ.ಎಚ್‌. ಮುನಿಯಪ್ಪ ಅವರು ಸಹ ರೇಸ್‌ನಲ್ಲಿದ್ದಾರೆ. ದಲಿತರಲ್ಲಿ ಎಡಗೈಗೆ ಪ್ರಮುಖ ಸ್ಥಾನ ದೊರಕಿಲ್ಲ. ಹೀಗಾಗಿ ತಮಗೆ ಅವಕಾಶ ನೀಡಬೇಕೆಂಬುದು ಅವರ ವಾದ.

ಡಿ.ಕೆ.ಶಿವಕುಮಾರ್‌ ಬಣ
ಅಹಿಂದ ವರ್ಗ ಕಾಂಗ್ರೆಸ್‌ ಜತೆಗಿದೆ. ಇದರ ಜತೆಗೆ ಪ್ರಮುಖ ಮೇಲ್ವರ್ಗವಾದ ಒಕ್ಕಲಿಗರನ್ನು ಸೆಳೆದು ಕೊಂಡರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾದಿ ಸುಗಮ. ಅಲ್ಲದೆ, ಶಿವಕುಮಾರ್‌ ಉತ್ತಮ ಸಂಘಟಕ, ಗೆಲುವೊಂದೇ ಮಾನದಂಡವಾಗುವ ಮತಗಟ್ಟೆರಾಜಕಾರಣದಲ್ಲಿ ಯಶಸ್ಸು ಬರುವಂತೆ ತಂತ್ರ ರೂಪಿಸುವಲ್ಲಿ ಪ್ರವೀಣ. ಸಂಪನ್ಮೂಲ ಕ್ರೋಡೀಕರಿಸುವ ಸಾಮರ್ಥ್ಯವು ಇದೆ.

ಎಂ.ಬಿ. ಪಾಟೀಲ್‌ ಬಣ
ಉತ್ತರ ಕರ್ನಾಟಕ ಭಾಗದ ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ದೊರೆಯಬೇಕು ಎಂತಾದರೇ ಅದಕ್ಕೆ ಎಂ.ಬಿ.ಪಾಟೀಲ್‌ ಸೂಕ್ತ. ಏಕೆಂದರೆ, ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಯುವಕ. ಸಂಪನ್ಮೂಲ ಕ್ರೋಡೀಕರಿಸುವ ಸಾಮರ್ಥ್ಯವಿದೆ (ಎಲ್ಲಕ್ಕಿಂತ ಮುಖ್ಯವಾಗಿ ಹೈಕಮಾಂಡ್‌ನಲ್ಲಿ ಉತ್ತಮ ಸಂಪರ್ಕಗಳಿವೆ).

Follow Us:
Download App:
  • android
  • ios