ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಚುನಾವಣೆಯಲ್ಲಿ ಮತ ಕೇಳಬಾರದು ಎಂಬ ಸುಪ್ರೀಂ ಕೋರ್ಟ್​ನ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ವಾಗತಿಸಿದ್ದಾರೆ.

ಬೆಂಗಳೂರು (ಜ.02): ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಚುನಾವಣೆಯಲ್ಲಿ ಮತ ಕೇಳಬಾರದು ಎಂಬ ಸುಪ್ರೀಂ ಕೋರ್ಟ್​ನ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ವಾಗತಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್​ ನೀಡಿರುವ ಆದೇಶ ಈಗಾಗಲೇ ಚುನಾವಣಾ ಆಯೋಗದ ಕಾನೂನಿನಲ್ಲಿದೆ. ಅದನ್ನೇ ಮರು ವ್ಯಾಖ್ಯಾನ ಮಾಡಿರುವ ಸಾಧ್ಯತೆ ಇದೆ. ಇತ್ತೀಚೆಗೆ ಧಾರ್ಮಿಕ ಮುಖಂಡರೇ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರನ್ನು ಹೇಗೆ ನಿಯಂತ್ರಿಸುತ್ತೀರಿ? ಕೆಲವು ಧಾರ್ಮಿಕ ಸಂಘಟನೆಗಳು ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳುತ್ತೇವೆ. ಅದೆಲ್ಲದಕ್ಕೂ ಹೇಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂಬುದು ಸುಪ್ರೀಂ ಕೋರ್ಟ್​ ಆದೇಶದ ಪ್ರತಿ ಬಂದ ಮೇಲೆ ತಿಳಿಯಲಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್​ ಸೇರ್ಪಡೆ ಸಂದರ್ಭದಲ್ಲಿ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಬಿಜೆಪಿಯವರು ದಲಿತರಿಗೆ ಏನು ಮಾಡುತ್ತಿದ್ದಾರೆ ಎಂದು ದೇಶದ ಜನ ನೋಡುತ್ತಿದ್ದಾರೆ. ಶ್ರೀನಿವಾಸ್ ಪ್ರಸಾದ್​ರನ್ನು ಸೇರಿಸಿಕೊಂಡು ದಲಿತರ ಉದ್ದಾರ ಮಾಡುವುದಾದರೆ, ಮಾಡಲಿ, ನಂಜನಗೂಡು ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚಿಸಲಾಗಿದ್ದು, ಕಾರ್ಯಕರ್ತರು ಹೊರಗಿನ ಅಭ್ಯರ್ಥಿ ಸೂಚಿಸಿದರೂ ಹೈ ಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.