ಮೈಸೂರು ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಈಗಾಗಲೇ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸಿದ್ದು, ಸಮುದಾಯ ಸೇವೆ ಮಾಡಲು ಸಿದ್ಧ ಎಂದು ಕಾರು ಮಾಲೀಕರು ತಿಳಿಸಿದ್ದಾರೆ.

ಬೆಂಗಳೂರು: ನಗರದ ಮೈಸೂರು ಮುಖ್ಯರಸ್ತೆಯಲ್ಲಿ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅಪಾಯಕಾರಿಯಾಗಿ, ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದ ಮೇಲೆ ಕಾರು ಮಾಲೀಕನ ವಿರುದ್ಧ ಕೆಂಗೇರಿ ಸಂಚಾರ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.

ಸಂಚಾರ ನಿಯಮ ಉಲ್ಲಂಘನೆಗೆ 8,500 ರು. ದಂಡ ಪಾವತಿಸಿದ್ದೇನೆ ಎಂದು ಮಾಹಿತಿ ನೀಡಿದ ಅರ್ಜಿದಾರರಿಗೆ, ‘ಈ ಮೊತ್ತ ಸಣ್ಣದಾಗಿದ್ದು, ನೀವು ಸಮುದಾಯ ಸೇವೆ ಮಾಡಬೇಕು’ ಎಂದು ಹೈಕೋರ್ಟ್ ಹೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರು ಸಮುದಾಯ ಸೇವೆ ಮಾಡಲು ಸಿದ್ಧರಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗೆ ಹಸಿರು ಬಣ್ಣದ ದುಬಾರಿ ಲ್ಯಾಂಬೊರ್ಗಿನಿ ಕಾರಿಗೆ ಕರ್ಕಶ ಧ್ವನಿಯ ಸೈಲೆನ್ಸರ್ ಅಳವಡಿಸಿಕೊಂಡು ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿರುವ ಕುರಿತು ವೀಡಿಯೊವೊಂದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜಾಲತಾಣದ ಪೋಸ್ಟ್ ಆಧರಿಸಿ ಕಾರಿನ ವಾರಸುದಾರ ಬಿ.ಆರ್. ಚಿರಂತನ್ ಎಂಬುವರ ವಿರುದ್ಧ ಕೆಂಗೇರಿ ಸಂಚಾರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಎಫ್‌ಐಆರ್ ಪ್ರಶ್ನಿಸಿ ಚಿರಂತನ್ ಹೈಕೋರ್ಟ್ ಮೊರೆ ಹೋಗಿದ್ದರು.

8,500 ರು. ದಂಡ ಪಾವತಿ

ಕಾರು ಖರೀದಿ ಸಂಬಂಧಿಸಿದಂತೆ 1.05 ಕೋಟಿ ರು. ಸಾರಿಗೆ ಇಲಾಖೆ ಶುಲ್ಕ ಕಟ್ಟಲಾಗಿದೆ. ಕ್ರಿಮಿನಲ್ ಕೇಸ್ ದಾಖಲಿಸುವ ಒಂದು ತಿಂಗಳು ಮೊದಲೇ ಈ ಸಂಚಾರ ನಿಯಮ ಉಲ್ಲಂಘನೆ ಆರೋಪಗಳಿಗೆ ಸಂಬಂಧಿಸಿದಂತೆ 8,500 ರು. ದಂಡ ಪಾವತಿಸಲಾಗಿದೆ. ಆದರೆ, ವೀಡಿಯೊ ವೈರಲ್ ಆದ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಹೀಗಾಗಿ, ಪ್ರಕರಣ ರದ್ದು ಮಾಡಬೇಕು ಎಂದು ಚಿರಂತನ್ ಪರ ವಕೀಲ ರಜತ್ ವಾದ ಮಂಡಿಸಿದ್ದರು.

ಟ್ರಾಫಿಕ್‌ನಲ್ಲಿ ಅತಿ ವೇಗ ಸಾಧ್ಯವೇ? ನ್ಯಾಯಮೂರ್ತಿ ಪ್ರಶ್ನೆ

‘ಬೆಂಗಳೂರಿನ ರಸ್ತೆಗಳಲ್ಲಿ ಬಂಪರ್ ಟು ಬಂಪರ್ ಟ್ರಾಫಿಕ್‌ನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಲು ಹೇಗೆ ಸಾಧ್ಯ?’ ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪ್ರಶ್ನಿಸಿದಾಗ, ‘ನಮ್ಮದೂ ಅದೇ ಪ್ರಶ್ನೆಯಾಗಿದೆ’ ಎಂದು ಅರ್ಜಿದಾರರ ಪರ ವಕೀಲ ರಜತ್ ಹೇಳಿದರು.

ಆಗ ನ್ಯಾಯಮೂರ್ತಿಯವರು, ‘ನೀವು ಜಿಗ್ ಜಾಗ್ ಆಗಿ ಕಾರು ಚಲಾಯಿಸಿದ್ದೀರಿ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ವಕೀಲ ರಜತ್, ‘ಅದು ಆರೋಪ ಮಾತ್ರ. ಒಂದು ವೇಳೆ ಜಿಗ್ ಜಾಗ್ ಓಡಿಸಿದ್ದರೂ ಅದು ಅತಿ ವೇಗದ ಚಾಲನೆಯಾಗುತ್ತದೆ. ಅಪಾಯಕಾರಿ ಮತ್ತು ಅಜಾಗರೂಕ ಚಾಲನೆ ಆಗುವುದಿಲ್ಲ’ ಎಂದರು.

‘ನೀವು ಕರ್ಕಶ ಶಬ್ದ ಮಾಡಿದ್ದೀರಿ’ ಎಂದು ನ್ಯಾಯಮೂರ್ತಿಗಳು ಹೇಳಿದಾಗ. ‘ಅದಕ್ಕಾಗಿಯೇ 8,500 ರು. ದಂಡ ಪಾವತಿಸಲಾಗಿದೆ. ಇನ್ನು ನಮ್ಮ ಕಕ್ಷಿದಾರನ ಚಾಲನೆಯನ್ನು ಅತಿ ವೇಗದ ಚಾಲನೆ ಎಂದು ಪರಿಗಣಿಸುವುದಾದರೇ ಅರ್ಧದಷ್ಟು ಜನಸಂಖ್ಯೆಯ ವಿರುದ್ಧ ಕೇಸ್ ದಾಖಲಿಸಬೇಕಾಗುತ್ತದೆ’ ಎಂದು ವಕೀಲ ರಜತ್ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ‘ಬೇರೆಯವರ ವಿರುದ್ಧ ಕೇಸ್ ದಾಖಲಿಸದಿರುವುದು ನಿಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕಾರಣವಾಗುವುದಿಲ್ಲ’ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.