ಗಣರಾಜ್ಯೋತ್ಸವ ಸಮಾರಂಭಕ್ಕಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರದ ನೀತಿಗಳ ಟೀಕೆಗಳಿವೆ. ಈ ಹಿನ್ನೆಲೆಯಲ್ಲಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಈ ಭಾಷಣವನ್ನು ಓದಲಿದ್ದಾರೆಯೇ ಅಥವಾ ತಿದ್ದುಪಡಿಗೆ ಸೂಚಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣ ವಿವಾದ ಘಟನೆ ಬೆನ್ನಲ್ಲೇ ಗಣರಾಜ್ಯೋತ್ಸವ ಭಾಷಣದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಬಹುದೇ ಎಂಬ ಕುತೂಹಲ ನಿರ್ಮಾಣವಾಗಿದೆ.
76ನೇ ಗಣರಾಜ್ಯೋತ್ಸವ ಸಮಾರಂಭ
ನಿಯಮಾನುಸಾರ ಗಣರಾಜ್ಯೋತ್ಸವ ಸಮಾರಂಭಕ್ಕೂ ರಾಜ್ಯ ಸರ್ಕಾರವೇ ರಾಜ್ಯಪಾಲರಿಗೆ ಭಾಷಣ ಸಿದ್ಧಪಡಿಸಿಕೊಡುತ್ತದೆ. ಆ ಪ್ರಕಾರ ಈ ವರ್ಷವೂ ಜ.26ರ ಸೋಮವಾರ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾಡಬೇಕಾದ ಭಾಷಣವನ್ನೂ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ.
ಮೂಲಗಳ ಪ್ರಕಾರ ಈ ಭಾಷಣದಲ್ಲೂ ರಾಜ್ಯ ಸರ್ಕಾರದ ಸಾಧನೆಗಳ ಜೊತೆಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನುದಾನ ಹಂಚಿಕೆ ತಾರತಮ್ಯ, ವಿವಿಧ ಯೋಜನೆಗಳಿಗೆ ಕೇಂದ್ರದ ಅನುದಾನ ಕಡಿತ, ತೆರಿಗೆ ಕಡಿತ ಸೇರಿದಂತೆ ಇನ್ನಿತರೆ ನೀತಿಗಳನ್ನು ಟೀಕಿಸುವ ಅಂಶಗಳಿವೆ.
ಸಾರ್ವಜನಿಕ ವಲಯದಲ್ಲಿ ಚರ್ಚೆ
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮತ್ತೊಮ್ಮೆ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣ ಓದುವ ವಿಚಾರವಾಗಿ ತಗಾದೆ ತೆಗೆಯಬಹುದೇ, ತಿದ್ದುಪಡಿಗೆ ಸಲಹೆ ನೀಡಬಹುದೇ? ನೀಡಿದ್ದೇ ಆದಲ್ಲಿ ಸರ್ಕಾರ ಯಾವ ಪ್ರತಿಕ್ರಿಯೆ ನೀಡಬಹುದು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಆದರೆ, ಲೋಕಭವನದ ಮೂಲಗಳ ಪ್ರಕಾರ, ರಾಜ್ಯಪಾಲರು ಸದ್ಯ ರಾಜ್ಯದಲ್ಲಿ ಇಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮ ನಿಮಿತ್ತ ಹೊರ ರಾಜ್ಯಕ್ಕೆ ತೆರಳಿದ್ದಾರೆ. ಭಾನುವಾರ ಸಂಜೆ ವೇಳೆಗೆ ನಗರಕ್ಕೆ ವಾಪಸ್ಸಾಗಲಿದ್ದು ಬಳಿಕವಷ್ಟೇ ಸರ್ಕಾರದ ಭಾಷಣವನ್ನು ಪರಿಶೀಲಿಸಿ ತಮ್ಮ ನಿಲುವು ಪ್ರಕಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.


