ಸಚಿವರು, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.  ಯಾವುದೇ ಕಾರಣಕ್ಕೂ ಕೂಡ ಸರ್ಕಾರದಲ್ಲಿ ಸಚಿವರು ಹಾಗೂ ಶಾಸಕರು ಸಿದ್ದರಾಮಯ್ಯ ವಿರುದ್ಧ ಅಥವಾ ಪರವಾದ ಹೇಳಿಕೆ ನೀಡುವಂತಿಲ್ಲ ಎಂದಿದ್ದಾರೆ. 

ಬೆಂಗಳೂರು : ಮೈತ್ರಿಕೂಟ ಸರ್ಕಾರದ ಪರ ಅಥವಾ ವಿರುದ್ಧ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾದ ಹೇಳಿಕೆ ಪರ ಅಥವಾ ವಿರುದ್ಧ ಮಾಧ್ಯಮಗಳ ಬಳಿ ಯಾವುದೇ ಹೇಳಿಕೆ ನೀಡಬಾರದು. ಇದೇ ವೇಳೆ, ಮೈತ್ರಿಕೂಟ ಸರ್ಕಾರದಲ್ಲಿ ಸ್ಥಾನ-ಮಾನ ದೊರೆಯದೆ ಹಲವಾರು ಶಾಸಕರು ಅತೃಪ್ತರಾಗಿದ್ದಾರೆ. ಹೀಗಾಗಿ, ಶಾಸಕರು ಹೇಳುವ ಕೆಲಸಗಳಿಗೆ ಪ್ರಾಧಾನ್ಯತೆ ನೀಡಿ ಮಾಡಬೇಕು. ಯಾವುದೇ ಕಾರಣಕ್ಕೂ ಯಾರಿಗೂ ಅಸಮಾಧಾನ ಉಂಟಾಗುವಂತೆ ನೋಡಿಕೊಳ್ಳಬೇಕು.

ಹೀಗಂತ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಕಾಂಗ್ರೆಸ್‌ನ ಎಲ್ಲಾ ಸಚಿವರಿಗೆ ತಾಕೀತು ಮಾಡಿದ್ದಾರೆ.

ಮೈತ್ರಿಕೂಟ ಸರ್ಕಾರದ ಬಾಳಿಕೆ ಕುರಿತು ಪರ- ವಿರುದ್ಧ ಹೇಳಿಕೆಗಳು ಹೊರ ಬೀಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಕಾಂಗ್ರೆಸ್‌ ಹೈಕಮಾಂಡ್‌ ಬಹಿರಂಗ ಹೇಳಿಕೆಗಳಿಗೆ ಬ್ರೇಕ್‌ ಹಾಕುವಂತೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸಚಿವರ ಸಭೆ ನಡೆಸಿದ ಪರಮೇಶ್ವರ್‌ ಅವರು ಸರ್ಕಾರದ ಬಾಳಿಕೆ ಕುರಿತ ಸಿದ್ದರಾಮಯ್ಯ ಅವರ ಪರ ಅಥವಾ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು. ಈ ವಿಚಾರದಲ್ಲಿ ಪರಿಪೂರ್ಣ ಸಂಯಮ ಕಾಯ್ದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು ಎನ್ನಲಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಸರ್ಕಾರ ಹಾಗೂ ಸಿದ್ದರಾಮಯ್ಯ ಪರ-ವಿರುದ್ಧ ಹೇಳಿಕೆ ನೀಡದಂತೆ ಸೂಚನೆ ನೀಡಿರುವುದು ಮಾತ್ರವಲ್ಲ, ಗೆಳೆಯರು, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜತೆ ಮಾತನಾಡುವಾಗಲೂ ಈ ವಿಚಾರದ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಬಾರದು. ಏಕೆಂದರೆ, ಯಾರು ಯಾವಾಗ ಮೊಬೈಲ್‌ನಲ್ಲಿ ಈ ಮಾತುಗಳನ್ನು ಚಿತ್ರೀಕರಿಸಿಕೊಂಡು ಮಾಧ್ಯಮಗಳ ಮೂಲಕ ಗೊಂದಲ ಸೃಷ್ಟಿಸುತ್ತಾರೋ ಹೇಳಲು ಸಾಧ್ಯವಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಖಾಸಗಿಯಾಗಿಯೂ ಮಾತನಾಡಬೇಡಿ ಎಂದು ಪರಮೇಶ್ವರ್‌ ಸಭೆಯಲ್ಲಿ ಸಚಿವರಿಗೆ ತಾಕೀತು ಮಾಡಿದರು ಎನ್ನಲಾಗಿದೆ.

ಮಾಧ್ಯಮಗಳ ಮುಂದೆ ಮಾತನಾಡುವುದಿದ್ದರೆ ಕೇವಲ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತನಾಡಿ. ಮಾಧ್ಯಮಗಳು ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಪ್ರಸ್ತಾಪಿಸಿದರೆ ಅದನ್ನು ಕೆಪಿಸಿಸಿ ಅಧ್ಯಕ್ಷರನ್ನು ಕೇಳುವಂತೆ ಹೇಳಿ. ನೀವಂತೂ ಯಾವ ಪ್ರತಿಕ್ರಿಯೆಯನ್ನು ನೀಡಬೇಡಿ ಎಂದು ತಿಳಿಸಿದರು ಎಂದು ಮೂಲಗಳು ಹೇಳಿವೆ.

ಮಾಧ್ಯಮಗಳು ಮೈತ್ರಿಕೂಟದ ವಿರುದ್ಧವಿದ್ದಂತಿದೆ!:

ಅಷ್ಟೇ ಅಲ್ಲದೆ, ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ಮೈತ್ರಿ ಕೂಟ ಸರ್ಕಾರದ ವಿರುದ್ಧ ಎಡೆಬಿಡದೆ ಸುದ್ದಿಗಳನ್ನು ಮಾಡುತ್ತಿವೆ. ಸರ್ಕಾರದ ವಿರುದ್ಧ ಮನಸ್ಥಿತಿ ಈ ಮಾಧ್ಯಮಗಳಿಗೆ ಇದ್ದಂತಿದೆ. ಹೀಗಾಗಿ ಮಾಧ್ಯಮಗಳು ಹಾಗೂ ಪತ್ರಕರ್ತರ ಜತೆ ಮಾತನಾಡುವಾಗ ತೀರಾ ಎಚ್ಚರ ವಹಿಸಿ. ಯಾವುದೇ ಕಾರಣಕ್ಕೂ ಆಫ್‌ ದ ರೆಕಾರ್ಡ್‌ ರೂಪದಲ್ಲೂ ಸರ್ಕಾರದ ಹಾಗೂ ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ ಎಂದು ಅವರು ಸಚಿವರಿಗೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಮೈತ್ರಿಕೂಟ ಸರ್ಕಾರವಾಗಿರುವ ಹಿನ್ನೆಲೆಯಲ್ಲಿ ಕೆಲವೊಂದು ಮೈತ್ರಿ ಧರ್ಮವನ್ನು ನಾವು ಪಾಲನೆ ಮಾಡಬೇಕಾಗುತ್ತದೆ. ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವಾಗ ಕಾಂಗ್ರೆಸ್‌ ಕಾರ್ಯಕರ್ತರ ಜತೆಗೆ ಜೆಡಿಎಸ್‌ ಕಾರ್ಯಕರ್ತರಿಗೂ ಮಾಹಿತಿ ನೀಡಿ. ಜೆಡಿಎಸ್‌ ಕಾರ್ಯಕರ್ತರ ಬೇಡಿಕೆಗಳಿಗೂ ಸ್ಪಂದಿಸಿ ಎಂದು ಅವರು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಇದೇ ವೇಳೆ ಕಾಂಗ್ರೆಸ್‌ನ ಬಹುತೇಕ ಶಾಸಕರು ಮೈತ್ರಿಕೂಟ ಸರ್ಕಾರದಲ್ಲಿ ಸ್ಥಾನ ಮಾನ ದೊರೆಯದಿರುವುದರಿಂದ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಶಾಸಕರು ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳಿಗಾಗಿ ನಿಮ್ಮ ಬಳಿ ಬಂದಾಗ ಹೆಚ್ಚಿನ ಪ್ರಾಧಾನ್ಯತೆ ನೀಡಿ ಅವುಗಳನ್ನು ಬಗೆಹರಿಸಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೂ ಶಾಸಕರು ಅಸಮಾಧಾನಗೊಳ್ಳಲು ಅವಕಾಶ ದೊರೆಯದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು

ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ- ಸಚಿವರು:

ಇದಕ್ಕೆ ಪ್ರತಿಯಾಗಿ ಮಾತನಾಡಿದ ಕೆಲ ಸಚಿವರು, ಸರ್ಕಾರದ ಬಾಳಿಕೆ ಬಗ್ಗೆ ಗೊಂದಲ ಮೂಡಲು ಮುಖ್ಯ ಕಾರಣ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗಳು. ಹೀಗಾಗಿ, ಮೊದಲು ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯ ಅವರು ಇಂತಹ ಹೇಳಿಕೆ ನೀಡದಂತೆ ತಡೆಯಬೇಕು ಆಗ ಇಂತಹ ಗೊಂದಲ ನಿರ್ಮಾಣವಾಗುವುದಿಲ್ಲ ಎಂದರು ಎನ್ನಲಾಗಿದೆ.

ಅಲ್ಲದೆ, ಇಲಾಖೆಗೆ ಸಂಬಂಧಿಸಿದ ವಿಚಾರಗಳಲ್ಲಿ ಜೆಡಿಎಸ್‌ನ ಕೆಲ ಸಚಿವರು ಅನಗತ್ಯ ಮೂಗು ತೂರಿಸುವುದಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳ ವರ್ಗಾವಣೆಯೂ ಸೇರಿದಂತೆ ನಮ್ಮ ಇಲಾಖೆಗೆ ಸಂಬಂಧಿಸಿದ ವಿಚಾರಗಳಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ದೊರೆಯಬೇಕು. ಈ ಬಗ್ಗೆ ಮೈತ್ರಿಕೂಟದ ಅಂಗ ಪಕ್ಷವಾದ ಜೆಡಿಎಸ್‌ ನಾಯಕರಿಗೆ ಮೈತ್ರಿಧರ್ಮ ಪಾಲಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು ಎನ್ನಲಾಗಿದೆ.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಳಂಬವಾಗುತ್ತಿರುವುದರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್‌ ಸಚಿವರು, ‘ಆದಷ್ಟುಬೇಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಬೇಕು ಮತ್ತು ಸಾದ್ಯವಾದಷ್ಟುನಾವು ಪ್ರತಿನಿಧಿಸುವ ಜಿಲ್ಲೆಗಳ ಉಸ್ತುವಾರಿಯನ್ನೇ ನಮಗೆ ನೀಡಬೇಕು ಎಂದು ಕೋರಿದರು ಎಂದು ಮೂಲಗಳು ತಿಳಿಸಿವೆ.

ನಿಗಮ, ಮಂಡಳಿ ನೇಮಕ

ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಒಬ್ಬೊಬ್ಬರು ಒಂದೊಂದು ಅರ್ಥದಲ್ಲಿ ಹೇಳುತ್ತಿದ್ದಾರೆ. ಹಾಗಾಗಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ. ಸರ್ಕಾರ ಸುಭದ್ರವಾಗಿದ್ದು, ಶೀಘ್ರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಿಗಮ-ಮಂಡಳಿಗಳಿಗೆ ನೇಮಕಾತಿ ಮಾಡಲಾಗುವುದು.

- ಡಾ. ಜಿ.ಪರಮೇಶ್ವರ್‌, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ