ರಾಜ್ಯ ಉಸ್ತುವಾರಿಯ ಈ ಮೊದಲ ಭೇಟಿಯ ಕೇಂದ್ರ ವಿಚಾರವು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಏನು ಮಾಡಬೇಕು ಎಂಬುದಕ್ಕೆ ಉತ್ತರ ಕಂಡುಕೊಳ್ಳುವುದೇ ಆಗಿದೆ. ಇದಲ್ಲದೆ, ಪಕ್ಷ ಸಂಘಟನೆ, ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ನೇರ ತಟ್ಟುವ, ಲಾಭ ತಂದುಕೊಡುವ, ಇನ್ನೂ ಯಾವ್ಯಾವ ಯೋಜನೆಗಳನ್ನು ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ, ಜಾತ್ಯತೀತ ಶಕ್ತಿಗಳೊಂದಿಗೆ ಹೊಂದಾಣಿಕೆ, ಪಕ್ಷ ಬಿಡುತ್ತಿರುವ ಸಮರ್ಥರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರ ರೂಪಿಸುವಂತಹ ವಿಚಾರಗಳ ಬಗ್ಗೆಯೂ ರಾಜ್ಯ ನಾಯಕರ ಸಲಹೆ ಸೂಚನೆ ಪಡೆಯಲಿದ್ದಾರೆ.

ಬೆಂಗಳೂರು(ಮೇ.08): ಉಸ್ತುವಾರಿ ವಹಿಸಿಕೊಂಡ ಮೊದಲ ಕ್ಷಣದಿಂದಲೇ ಎದುರಾಗಿರುವ ಕೆಪಿಸಿಸಿ ಅಧ್ಯಕ್ಷರು ಮುಂದುವರೆಯ ಬೇಕೋ ಬೇಡವೋ, ಬೇಡ ಎಂದಾದರೆ ಬದಲಿ ಯಾರು ಎಂಬ ಅತ್ಯಂತ ಕ್ಲಿಷ್ಟಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಹೊಣೆ ನಿರ್ವಹಿಸಲು ನೂತನ ಉಸ್ತುವಾರಿ ವೇಣುಗೋಪಾಲ್‌ ಹಾಗೂ ತಂಡ ಸೋಮವಾರ ಬೆಂಗಳೂರಿಗೆ ಬಂದಿಳಿಯಲಿದೆ.

ಸೋಮವಾರದಿಂದ ನಾಲ್ಕು ದಿನ ಬೆಂಗಳೂರಿನಲ್ಲಿ ವೇಣುಗೋಪಾಲ್‌ ಬೀಡು ಬಿಡಲಿದ್ದರೂ ಮೊದಲ ಮೂರು ದಿನ ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದ ಸಮಸ್ತ ನಿರ್ಣಾಯಕ ವ್ಯಕ್ತಿಗಳೊಂದಿಗೆ ನೇರಾನೇರ ಮಾತುಕತೆ ನಡೆಸಲಿದ್ದಾರೆ. ಕಡೆಯ ದಿನ ಕಾರ್ಯಕರ್ತರೊಂದಿಗೆ ಸಮಾಲೋಚನೆ ಕೈಗೊಳ್ಳಲಿದ್ದಾರೆ. 
ರಾಜ್ಯ ಉಸ್ತುವಾರಿಯ ಈ ಮೊದಲ ಭೇಟಿಯ ಕೇಂದ್ರ ವಿಚಾರವು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಏನು ಮಾಡಬೇಕು ಎಂಬುದಕ್ಕೆ ಉತ್ತರ ಕಂಡುಕೊಳ್ಳುವುದೇ ಆಗಿದೆ. ಇದಲ್ಲದೆ, ಪಕ್ಷ ಸಂಘಟನೆ, ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ನೇರ ತಟ್ಟುವ, ಲಾಭ ತಂದುಕೊಡುವ, ಇನ್ನೂ ಯಾವ್ಯಾವ ಯೋಜನೆಗಳನ್ನು ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ, ಜಾತ್ಯತೀತ ಶಕ್ತಿಗಳೊಂದಿಗೆ ಹೊಂದಾಣಿಕೆ, ಪಕ್ಷ ಬಿಡುತ್ತಿರುವ ಸಮರ್ಥರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರ ರೂಪಿಸುವಂತಹ ವಿಚಾರಗಳ ಬಗ್ಗೆಯೂ ರಾಜ್ಯ ನಾಯಕರ ಸಲಹೆ ಸೂಚನೆ ಪಡೆಯಲಿದ್ದಾರೆ.
ಆದರೆ, ಈ ಭೇಟಿಯ ಕೇಂದ್ರ ವಿಚಾರವಾದ ಕೆಪಿಸಿಸಿ ಅಧ್ಯಕ್ಷರ ವಿಚಾರ ವೇಣುಗೋಪಾಲ್‌ ಪಾಲಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಲಿದೆ. ಏಕೆಂದರೆ, ಈ ಹುದ್ದೆಯಲ್ಲಿ ಬಂದು ಕೂರುವವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಲಿದ್ದಾರೆ ಮತ್ತು ಚುನಾವಣೆಯಲ್ಲಿ ಗೆದ್ದರೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನೀಡುವ ಸಾಮರ್ಥ್ಯವನ್ನು ಸ್ಥಾನ ಬಲದಿಂದ ಪಡೆಯಲಿದ್ದಾರೆ.
ಹುದ್ದೆಯಲ್ಲಿ ಮುಂದುವರೆಯಲು ಬಯಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಶತಾಯಗತಾಯ ಪರಮೇಶ್ವರ್‌ ಬದಲಾಗಬೇಕು ಹಾಗೂ ಆ ಸ್ಥಾನಕ್ಕೆ ತಮ್ಮೊಂದಿಗೆ ಸಾಮರಸ್ಯದಿಂದ ಕೆಲಸ ಮಾಡುವವರೇ ಬೇಕು (ಎಸ್‌.ಆರ್‌.ಪಾಟೀಲ್‌) ಎಂದು ಹಟಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸಿದ್ದರೂ ಮತ್ತು ಹೈಕಮಾಂಡ್‌ ದೆಹಲಿಯಲ್ಲಿ ನೀಡಿದ ಹೊಣೆಯನ್ನೇ ನಿರ್ವಹಿಸಬೇಕಾದ ಅನಿವಾ ರ್ಯತೆಯಿದ್ದರೂ ರಾಜ್ಯದಲ್ಲಿ ಒಂದು ಹಿಡಿತವಿರಲಿ ಎಂಬ ಕಾರಣಕ್ಕೆ ತಮಗೆ ಬೇಕಾದವರನ್ನು ಈ ಹುದ್ದೆಗೇರಿ ಸಲು ಪ್ರಯತ್ನಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಈ ಮೂವರಲ್ಲಿ ಯಾರ ವಾದಕ್ಕೆ ಮನ್ನಣೆ ನೀಡಬೇಕೆಂಬುದು ವೇಣುಗೋಪಾಲ್‌ ಮುಂದಿರುವ ಸದ್ಯದ ಸವಾಲು.
ಬಾರಿ ಅಧ್ಯಕ್ಷರಾದರೆ ಮುಂದೆ ತಾವೇ ಸಿಎಂ ಅಭ್ಯರ್ಥಿ ಎಂಬ ಕಾರಣಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವ ಡಿ.ಕೆ. ಶಿವಕುಮಾರ್‌, ದಲಿತರಿಗೆ ಮನ್ನಣೆ ಹೆಸರಿನಲ್ಲಿ ಕೆ.ಎಚ್‌. ಮುನಿಯಪ್ಪ, ಸಿಎಂ ಪ್ರತಿಪಾದಿಸಿದ ಉತ್ತರ ಕರ್ನಾಟಕದ ಲಿಂಗಾಯತ ಸಿದ್ಧಾಂತವನ್ನು ಬಳಸಿಕೊಂಡು ಹುದ್ದೆ ಹಿಡಿಯಲು ಹೈಕಮಾಂಡ್‌ನ ಸಂಪರ್ಕಗಳನ್ನು ಪ್ರಬಲವಾಗಿ ಬಳಸುತ್ತಿರುವ ಎಂ.ಬಿ. ಪಾಟೀಲ್‌.. ಈ ನಾಯಕರು ನಿರ್ಮಾಣ ಮಾಡುವ ಒತ್ತಡ ತಂತ್ರದ ನಡುವೆ ನಿಜಕ್ಕೂ ಮುಂದಿನ ಚುನಾವಣೆಯಲ್ಲಿ ಯಾರು ಅಧ್ಯಕ್ಷರಾದರೆ ಕಾಂಗ್ರೆಸ್‌ಗೆ ಹಿತ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಕಂಡುಕೊಳ್ಳವ ಹೊಣೆಯನ್ನು ವೇಣುಗೋಪಾಲ ಹಾಗೂ ತಂಡ ನಿರ್ವಹಿಸಬೇಕು.

ರಾಜ್ಯದಲ್ಲೇ ಮನೆ

ಎಐಸಿಸಿ ನಿಯೋಜಿಸಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಹಾಗೂ 4 ವಲಯ ಉಸ್ತುವಾರಿಗಳಿಗೆ ರಾಜ್ಯದಲ್ಲೇ ಮನೆ ಮಾಡಿಕೊಡಲಾಗಿದ್ದು, ಚುನಾವಣೆ ಮುಗಿಯುವವರೆಗೂ ವಲಯ ಉಸ್ತುವಾರಿಗಳು ರಾಜ್ಯದಲ್ಲೇ ಉಳಿದುಕೊಳ್ಳಲಿದ್ದಾರೆ. ವೇಣುಗೋಪಾಲ್‌ ಅವರಿಗೆ ಬೆಂಗಳೂರಿನಲ್ಲಿ ವಾಸವಿರಲು ಮನೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಾಣಿಕ್ಕಂ ಟಾಗೋರ್‌ ಅವರು ಬೆಳಗಾವಿ ವಲಯ, ಡಾ| ಸಾಕೆ ಸೈಲಜನಾಥ್‌ ಅವರು ಕಲಬುರಗಿ ವಲಯ, ಮಧು ಯಕ್ಷಿ ಗೌಡ್‌ ಅವರು ಬೆಂಗಳೂರು ವಲಯ, ಪಿ.ಸಿ.ವಿಷ್ಣುನಂದನ ಅವರು ಮೈಸೂರು ವಲಯ ಉಸ್ತುವಾರಿಯಾಗಿ ಕಾರ್ಯನಿರ್ವ ಹಿಸಲಿದ್ದು, ಆಯಾ ವಲಯದ ಕೇಂದ್ರ ಸ್ಥಳದಲ್ಲಿ ವಾಸವಿರಲು ಮನೆ ಜತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.