ಉತ್ತಮ ಆಡಳಿತ ಹಾಗೂ ಜನಪ್ರಿಯ ಕಾರ್ಯಕ್ರಮಗಳ ಸರಮಾಲೆಯನ್ನೇ ನೀಡಿದರೂ ವಿಧಾನಸಭೆ ಚುನಾವಣೆಯಲ್ಲಿ 144 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲುಂಡಿದೆ. ಇಂತಹ ಸೋಲಿಗೆ ಕಾರಣವೇನು? ಯಾವ ಜಾತಿ ಹಾಗೂ ಸಮುದಾಯಗಳು ಬೆಂಬಲ ನೀಡಿದವು ಮತ್ತು ಯಾವ ಜಾತಿ ಸಮುದಾಯಗಳು ಪಕ್ಷಕ್ಕೆ ವಿರುದ್ಧವಾಗಿದ್ದವು ಹಾಗೂ ಏಕೆ ಎಂಬ ವಿವರವೂ ಸೇರಿದಂತೆ ವಾಸ್ತವಾಂಶ ವರದಿಯನ್ನು ಜೂ. 10ರೊಳಗೆ ನೀಡುವಂತೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ನಿರ್ದೇಶನ ನೀಡಿದ್ದಾರೆ.

ಸೋಲಿನ ಬಗ್ಗೆ ಪರಂ ‘ಆಪರೇಷನ್‌’

- ಉತ್ತಮ ಆಡಳಿತ ನೀಡಿಯೂ ಕಾಂಗ್ರೆಸ್‌ ಸೋತಿದ್ದು ಏಕೆ?

- 10 ದಿನದಲ್ಲಿ ವರದಿ ನೀಡಲು ಜಿಲ್ಲಾಧ್ಯಕ್ಷರಿಗೆ ಸೂಚನೆ

- ವರದಿ ಬಂದ ಬಳಿಕ ಆತ್ಮಾವಲೋಕನ ಸಭೆ

ಪರಂ ಪ್ರಶ್ನೆಗಳು?

- ಉತ್ತಮ ಆಡಳಿತ, ಜನಪ್ರಿಯ ಕಾರ್ಯಕ್ರಮ ನೀಡಿದರೂ 144 ಕ್ಷೇತ್ರಗಳಲ್ಲಿ ಸೋತಿದ್ದೇವೆ. ಕಾರಣ ಏನು?

- ಯಾವ ಸಮುದಾಯ ನಮ್ಮನ್ನು ಬೆಂಬಲಿಸಿವೆ? ಯಾವ ಸಮುದಾಯಗಳು ವಿರುದ್ಧವಾಗಿವೆ?

- 2013ರಲ್ಲಿ ಶೇ.36.5 ಮತ ಗಳಿಸಿ 121 ಸ್ಥಾನ ಗೆದ್ದಿದ್ದೆವು. ಈ ಬಾರಿ ಶೇ.38.4 ಮತ ಗಳಿಸಿದ್ದರೂ 79 ಸ್ಥಾನವಷ್ಟೇ ಸಿಕ್ಕಿದ್ದೇಕೆ?

ಬೆಂಗಳೂರು: ಉತ್ತಮ ಆಡಳಿತ ಹಾಗೂ ಜನಪ್ರಿಯ ಕಾರ್ಯಕ್ರಮಗಳ ಸರಮಾಲೆಯನ್ನೇ ನೀಡಿದರೂ ವಿಧಾನಸಭೆ ಚುನಾವಣೆಯಲ್ಲಿ 144 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲುಂಡಿದೆ. ಇಂತಹ ಸೋಲಿಗೆ ಕಾರಣವೇನು? ಯಾವ ಜಾತಿ ಹಾಗೂ ಸಮುದಾಯಗಳು ಬೆಂಬಲ ನೀಡಿದವು ಮತ್ತು ಯಾವ ಜಾತಿ ಸಮುದಾಯಗಳು ಪಕ್ಷಕ್ಕೆ ವಿರುದ್ಧವಾಗಿದ್ದವು ಹಾಗೂ ಏಕೆ ಎಂಬ ವಿವರವೂ ಸೇರಿದಂತೆ ವಾಸ್ತವಾಂಶ ವರದಿಯನ್ನು ಜೂ. 10ರೊಳಗೆ ನೀಡುವಂತೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ಶೇ. 36.5ರಷ್ಟುಮತ ಗಳಿಸಿ ಕಾಂಗ್ರೆಸ್‌ 121 ಸ್ಥಾನ ಗಳಿಸಿತ್ತು. 2018ರ ಚುನಾವಣೆಯಲ್ಲಿ 38.4ರಷ್ಟುಶೇಕಡಾವಾರು ಮತ ಗಳಿಸಿದ್ದರೂ 79 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಹೀಗೇಕೆ’ ಎಂದು ಪ್ರಶ್ನಿಸಿದರು.

‘ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ರಾಹುಲ್‌ಗಾಂಧಿ 29 ದಿನಗಳ ಕಾಲ 14 ಸಾವಿರ ಕಿ.ಮೀ. ಯಾತ್ರೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೂ ಉತ್ತಮ ವರ್ಚಸ್ಸು ಉಳಿಸಿಕೊಂಡು ಚುನಾವಣೆ ಎದುರಿಸಿದ್ದರು. ಹೀಗಿದ್ದರೂ ನಿರೀಕ್ಷಿತ ಸ್ಥಾನ ಗೆಲ್ಲಲು ವಿಫಲವಾಗಿದ್ದೇವೆ. ಸೋಲಿನ ಬಗ್ಗೆ ಪ್ರತಿಯೊಬ್ಬ ಜಿಲ್ಲಾಧ್ಯಕ್ಷರು ತಮ್ಮ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ವರದಿಯನ್ನು ಜೂ.10 ರೊಳಗಾಗಿ ಸಲ್ಲಿಕೆ ಮಾಡಬೇಕು’ ಎಂದು ನಿರ್ದೇಶಿಸಿದರು.

ವರದಿ ಬಳಿಕ ಆತ್ಮಾವಲೋಕನ ಸಭೆ:

ಪ್ರತಿ ಕ್ಷೇತ್ರದಲ್ಲಿ ಸೋಲಿಗೆ ಸ್ಥಳೀಯ ಕಾರಣಗಳು ಏನು? ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸ್ಥಳೀಯವಾಗಿ ಪ್ರಚಾರ ಮಾಡಲು ವಿಫಲವಾಗಿದ್ದು ಏಕೆ? ಚುನಾವಣೆಯಲ್ಲಿ ಯಾವ ಕೋಮಿನವರು ಕಾಂಗ್ರೆಸ್‌ ಪರವಾಗಿ ನಿಂತಿದ್ದರು? ಯಾವ ಕೋಮು ವಿರುದ್ಧವಾಗಿ ನಿಂತಿದ್ದರು? ಗೆದ್ದಿರುವ ಅಭ್ಯರ್ಥಿ ಮಾಡಿದ ತಂತ್ರಗಳೇನು ಎಂಬಿತ್ಯಾದಿ ಸಮಗ್ರ ವರದಿಯನ್ನು ನೀಡಬೇಕು. ಮುಂದೆ ಪಕ್ಷ ಸಂಘಟನೆಗೆ ಅಗತ್ಯವಿರುವ ಕ್ರಮ ಹಾಗೂ ಪಕ್ಷಕ್ಕಾಗಿ ಸಮರ್ಥವಾಗಿ ದುಡಿದವರ ಪಟ್ಟಿಯನ್ನೂ ನೀಡಬೇಕು. ಈ ಮಾಹಿತಿಯನ್ನು ಕ್ರೋಡೀಕರಿಸಿ ಪರಿಶೀಲಿಸಲು ಕೆಪಿಸಿಸಿ ಮಟ್ಟದಲ್ಲಿ ಸಮಿತಿ ನಡೆಸಲಾಗುವುದು. ಸಮಿತಿಯು ಪ್ರತಿ ಜಿಲ್ಲೆಯಿಂದಲೂ ಮಾಹಿತಿ ಸ್ವೀಕರಿಸಿದ ಬಳಿಕ ಆತ್ಮಾವಲೋಕನ ಸಭೆ ನಡೆಸಲಾಗುವುದು ಎಂದು ಹೇಳಿದರು.

ಪಕ್ಷ ವಿರೋಧಿಗಳ ವಿರುದ್ಧ ಕಠಿಣ ಕ್ರಮ:

ಸಂಬಂಧಪಟ್ಟಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಪದಾಧಿಕಾರಿಗಳು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರೆ ಮಾಹಿತಿ ನೀಡಬೇಕು. ರಾಹುಲ್‌ಗಾಂಧಿ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರನ್ನು ಕ್ಷಮಿಸಿಸುವ ಪ್ರಶ್ನೆಯೇ ಇಲ್ಲ ಎಂದು ಪರಮೇಶ್ವರ್‌ ಎಚ್ಚರಿಕೆ ನೀಡಿದರು.

ನಿಗಮ-ಮಂಡಳಿ ಬಗ್ಗೆ 10 ದಿನದಲ್ಲಿ ವರದಿ ಕೊಡಿ:

ಕಳೆದ ಅವಧಿಯಲ್ಲಿ ಮಾಡಿದಂತೆ ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ನೇಮಕಾತಿಯಲ್ಲಿ ವಿಳಂಬ ಮಾಡುವುದಿಲ್ಲ. ಹೀಗಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಪಕ್ಷಕ್ಕೆ ದುಡಿದವರ ಪಟ್ಟಿಯನ್ನು 10 ದಿನದಲ್ಲಿ ನೀಡಬೇಕು. ಪಟ್ಟಿಯನ್ನು ಪರಿಶೀಲಿಸಿ ಸೂಕ್ತ ಅಭ್ಯರ್ಥಿಗಳಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಭರವಸೆ ನೀಡಿದರು.

ಜೆಡಿಎಸ್‌ ಜತೆ ಹೊಂದಾಣಿಕೆಗೆ ಪರಂ ಸೂಚನೆ

2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಪಕ್ಷ ಗೆಲ್ಲುವ ಮುಖಾಂತರ ರಾಹುಲ್‌ ಗಾಂಧಿಯನ್ನು ಪ್ರಧಾನಮಂತ್ರಿ ಮಾಡಬೇಕು. ಈ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಚುನಾವಣಾ ಪೂರ್ವ ಮೈತ್ರಿಗೆ ಹೈಕಮಾಂಡ್‌ ನಿರ್ಧಾರ ಮಾಡಿದೆ. ಹೀಗಾಗಿ ಜೆಡಿಎಸ್‌ ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು.

ಇದೇ ವೇಳೆ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಉಪ ಚುನಾವಣೆಯ ಬಗ್ಗೆ ಚರ್ಚಿಸಲಾಯಿತು. ಈ ಚುನಾವಣೆಯಲ್ಲೇ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳಬೇಕೆ ಅಥವಾ ನೇರವಾಗಿ ಸ್ಪರ್ಧಿಸಬೇಕೆ ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಜತೆಗೆ ಜಯನಗರ, ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಹೈಕಮಾಂಡ್‌ ಜತೆ ತೀರ್ಮಾನಿಸಿ ಚರ್ಚಿಸಲಾಗುವುದು ಎಂದು ಹೇಳಿದರು.

ಪಕ್ಷಕ್ಕೆ ದುಡಿದವರಿಗೆ ಸಚಿವ ಸ್ಥಾನ ನೀಡಿ: ಕಾರ್ಯಕರ್ತರ ಒತ್ತಾಯ

ಬೆಂಗಳೂರು: ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಪದಾಧಿಕಾರಿಗಳು ಕಾಂಗ್ರೆಸ್‌ ಸಚಿವರ ವಿರುದ್ಧ ಹರಿಹಾಯ್ದಿದ್ದು, ಈ ಬಾರಿಯಾದರೂ ಪಕ್ಷದ ಬಗ್ಗೆ ಬದ್ಧತೆ ಇರುವಂತಹ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಿ. ಅಧಿಕಾರ ಸಿಕ್ಕ ತಕ್ಷಣ ಪಕ್ಷವನ್ನೇ ಮರೆಯುವವರಿಗೆ ಅಧಿಕಾರ ನೀಡಬೇಡಿ ಎಂದು ಒತ್ತಾಯಿಸಿದರು.

‘ಕಳೆದ ಬಾರಿ ಸಚಿವರಾಗಿದ್ದವರು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಬೆಲೆಯನ್ನೇ ಕೊಡುತ್ತಿರಲಿಲ್ಲ. ಪಕ್ಷದ ಕೆಲಸಗಳಿಗಾಗಿ ಹೋದರೆ ಗನ್‌ಮ್ಯಾನ್‌, ಪಿಎ ಕಡೆ ಕೈ ತೋರುತ್ತಿದ್ದರು. ಇಂಥಹವರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಇಂತಹವರ ಮೇಲಿನ ಕಾರ್ಯಕರ್ತರ ಕೋಪ ಪಕ್ಷದ ಮೇಲೂ ಪರಿಣಾಮ ಬೀರುತ್ತದೆ. ಈ ಬಾರಿ ಪಕ್ಷ ಸೋಲಲು ಇದೂ ಕಾರಣ’ ಎಂದು ಆರೋಪಿಸಿದರು.

ನಿಗಮ-ಮಂಡಳಿ ನಿಷ್ಠಾವಂತರಿಗೆ ನೀಡಿ:

ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಸಹ ಪಕ್ಷಕ್ಕಾಗಿ ದುಡಿದವರಿಗೆ ನೀಡಬೇಕು. ಕಳೆದ ಬಾರಿ ಅಧಿಕಾರ ಪಡೆದವರಿಗೆ ಮತ್ತೊಮ್ಮೆ ಅಧಿಕಾರ ನೀಡಬೇಡಿ ಎಂದು ಸಲಹೆ ನೀಡಿದರು.

ಕೊನೆ ಘಳಿಗೆಯಲ್ಲಿ ಹಿರಿಯ ನಾಯಕರು ಸೂಚಿಸಿದವರಿಗೆ ಅಧಿಕಾರ ಕೊಡುತ್ತೀರಿ. ಇದು ನಿಷ್ಠಾವಂತರ ಕಾರ್ಯಕರ್ತರಿಗೆ ಕೊಡುವ ಗೌರವ ಅಲ್ಲ. ಇನ್ನಾದರೂ ಪಕ್ಷವು ಅಧಿಕಾರ ಹಂಚಿಕೆ ಮಾಡುವ ಪದ್ಧತಿ ಬದಲಾಗಬೇಕು ಎಂದು ಒತ್ತಾಯಿಸಿದರು.