ಅವನೆಲ್ಲೇ ಕಂಡರೂ ಸರಿ ಐಟಿ ಅಧಿಕಾರಿಗಳಂತೆ ದಾಳಿ ಮಾಡಲು ಹುಡುಗಿಯರ ತಂಡ ತಯಾರಾಗಿತ್ತು. ಹಿಂದಿನ ದಿನ ಪೂರ್ತಿ ಫೋನಿನಲ್ಲೇ ಯೋಜನೆ ರೂಪಿಸಿ ಕಾಲೇಜಿಗೆ ಬಂದ ಹುಡುಗಿಯರಿಗೆ ಅವನು ಮಾತ್ರ ದೊಡ್ಡ ಶಾಕ್ ಕೊಟ್ಟಿದ್ದ!
ಅವನು ಕ್ಲಾಸಿನ ತಲೆಹರಟೆ ಹುಡುಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವನು. ತರಗತಿಯ ಅಷ್ಟೂ ಹುಡುಗಿಯರನ್ನೂ ಬಿಟ್ಟೂಬಿಡದೆ ರೇಗಿಸುತ್ತಾ, ಕಾಲೆಳೆಯುತ್ತಿದ್ದ. ಆದರೆ ಅವರಲ್ಲಿ ಒಬ್ಬಳ ಮೇಲೆ ಮಾತ್ರ ವಿಶೇಷ ಪ್ರೀತಿ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಬೇಕೆಂಬ ಬಯಕೆ. ಎಷ್ಟೋ ಬಾರಿ ತರಗತಿಯಲ್ಲೇ ಪ್ರಪೋಸ್ ಮಾಡಿ ಮಂಗಳಾರತಿ ಮಾಡಿಸಿಕೊಂಡಿದ್ದ. ಆದರೆ ತಲೆಹರಟೆಯ ಉತ್ತುಂಗ ತಲುಪಿದ್ದ ಅವನಿಗೆ ಅದೆಲ್ಲಾ ತಾಗುತ್ತಿರಲಿಲ್ಲ. ಇವನ ಆಟಗಳನ್ನು ನೋಡಿ ನೋಡಿ ಬೇಸತ್ತವಳಿಗೆ ಅವನಿಂದ ಮುಕ್ತಿ ಸಿಕ್ಕರೆ ಸಾಕೆನಿಸಿಹೋಗಿತ್ತು. ಅವಳ ಸಮಸ್ಯೆಯನ್ನರಿತ ತರಗತಿಯ ಹುಡುಗಿಯರೆಲ್ಲಾ ಅವಳ ಬೆಂಬಲಕ್ಕೆ ನಿಂತರು.
ಮೊನ್ನೆ ಸೋಮವಾರ, ಅದಕ್ಕಿಂತಲೂ ಮಿಗಿಲಾಗಿ ‘ರಕ್ಷಾ ಬಂಧನ’ದ ದಿನ. ಅವನನ್ನು ಖೆಡ್ಡಾಕ್ಕೆ ಬೀಳಿಸಲು ಹುಡುಗಿಯರ ಗುಂಪು ಸರ್ವಸನ್ನದ್ಧವಾಗಿತ್ತು. ಅವನೆಲ್ಲೇ ಕಂಡರೂ ಸರಿ ಐಟಿ ಅಧಿಕಾರಿಗಳಂತೆ ದಾಳಿ ಮಾಡಲು ಹುಡುಗಿಯರ ತಂಡ ತಯಾರಾಗಿತ್ತು. ಹಿಂದಿನ ದಿನ ಪೂರ್ತಿ ಫೋನಿನಲ್ಲೇ ಯೋಜನೆ ರೂಪಿಸಿ ಕಾಲೇಜಿಗೆ ಬಂದ ಹುಡುಗಿಯರಿಗೆ ಅವನು ಮಾತ್ರ ದೊಡ್ಡ ಶಾಕ್ ಕೊಟ್ಟಿದ್ದ! ಕ್ಯಾಂಟೀನಿನಿಂದ ಹಿಡಿದು ಕಾರಿಡಾರಿನ ಮೂಲೆ ಮೂಲೆಗಳಲ್ಲೂ ಅವನಿಗಾಗಿ ಶೋಧಕಾರ್ಯ ಆರಂಭವಾಯ್ತು. ಊಹ್ಞೂಂ. ಅವನ ಸುಳಿವೇ ಇಲ್ಲ. ಇವರ ಪ್ರಯತ್ನವನ್ನು ವಿಫಲಗೊಳಿಸುವ ಸಲುವಾಗಿ ಅಂದು ಆತ ಕಾಲೇಜಿಗೆ ಬರಲೇ ಇಲ್ಲ! ಫೋನ್ ಮಾಡಿದರೂ ಉತ್ತರವಿಲ್ಲ.
ಹುಡುಗಿಯರ ಅಷ್ಟೂ ಯೋಜನೆಗಳೂ ತಲೆ ಕೆಳಗಾಗಿತ್ತು. ಹೌದು! ಇತ್ತೀಚಿನ ಅನಧಿಕೃತ ಸಮೀಕ್ಷೆಗಳಿಂದ ತಿಳಿದು ಬಂದಿರುವುದೇನೆಂದರೆ- ರಕ್ಷಾ ಬಂಧನದ ದಿನ ಹುಡುಗರು ಸ್ವಯಂ ಪ್ರೇರಿತರಾಗಿ ಗೃಹ ಬಂಧನಕ್ಕೊಳಗಾಗುತ್ತಿದ್ದಾರೆ. ಅದರಲ್ಲೂ ಕಾಲೇಜು ಹುಡುಗರಂತೂ ರಕ್ಷಾ ಬಂಧನವಿರುವ ವಾರವಿಡೀ ಮೈಯೆಲ್ಲಾ ಕಣ್ಣಾಗಿರುತ್ತಾರೆ. ಖಾಕಿಗೂ ಹೆದರದ ಹುಡುಗರು ರಾಖಿಗೆ ಹೆದರುತ್ತಾರೆ ಎಂಬ ಆರೋಪಕ್ಕೆ ಹುಡುಗರು ಹೀಗೆ ಹೇಳುತ್ತಾರೆ: ಅಯ್ಯೋ! ರಾಖಿ ಕಟ್ಟಿಸಿಕೊಳ್ಳೋಕೆ ನಮಗೇನು ತೊಂದರೆ ಇಲ್ಲ ಸ್ವಾಮಿ. ಆದರೆ ಎಲ್ಲರೂ ಸಾಮೂಹಿಕವಾಗಿ ಅಣ್ಣನ ಪಟ್ಟ ಕಟ್ಟಿದರೆ ನಮ್ಮ ಕಥೆ ಏನು? ಕಾಲೇಜಿಗೆ ಹೋಗುವಾಗಲೇ ಸನ್ಯಾಸತ್ವ ತೆಗೆದುಕೊಳ್ಳೋಕೆ ಆಗುತ್ತಾ? ಈ ವಯಸ್ಸಲ್ಲಿ ಅಲ್ಲದೇ ಇನ್ಯಾವಾಗ ಲೈನ್ ಹೊಡೆಯೋದು? ಕಡೇ ಪಕ್ಷ ನಮ್ಮ ಅನುಮತಿ ಪಡೆದು ಕಟ್ಟವುದಾದರೆ ಹ್ಞೂಂ ಅನ್ನಬಹುದಿತ್ತು. ಆದರೆ ಅನುಮತಿ ಪಡೆಯುವ ಸೌಜನ್ಯವಿರಲಿ, ಕಳ್ಳ ಕಾಕರನ್ನು ಪೊಲೀಸರು ಅಟ್ಟಿಸಿಕೊಂಡು ಹೋಗುವಂತೆ ಮಾಡಿದರೆ ಯಾರಿಗೆ ತಾನೆ ಕಟ್ಟಿಸಿಕೊಳ್ಳುವ ಮನಸ್ಸಾಗುತ್ತೆ? ಇಷ್ಟಾಗಿಯೂ ಅಣ್ಣನಾಗಿ ರಕ್ಷಣೆ ನೀಡಿದರೆ ಸಾಕು ಎಂದು ಒಳ್ಳೇ ಮನಸ್ಸಿನಿಂದ ರಾಖಿ ಕಟ್ಟುವವರಿಗೆ ‘ಕೈ ಚಾಚಲು’ ಸದಾ ಸಿದ್ಧ ಎನ್ನುವ ಹುಡುಗರೂ ಇದ್ದಾರೆ.?
ನಿರ್ವಹಣೆ: ರಾಜೇಶ್ ಶೆಟ್ಟಿ, ಕನ್ನಡಪ್ರಭ
