ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದ ಎರಡು ಗುಂಪುಗಳನ್ನು ಚದುರಿಸುವ ಸಂದರ್ಭದಲ್ಲಿ ಕೊಪ್ಪಳದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಬೂಟಿನಿಂದ ಹೊಡೆದಿದ್ದಾರೆನ್ನಲಾದ ತಿಂಗಳ ಹಿಂದಿನ ವಿಡಿಯೋವೊಂದು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಗಂಗಾವತಿ (ಮೇ.26): ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದ ಎರಡು ಗುಂಪುಗಳನ್ನು ಚದುರಿಸುವ ಸಂದರ್ಭದಲ್ಲಿ ಕೊಪ್ಪಳದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಬೂಟಿನಿಂದ ಹೊಡೆದಿದ್ದಾರೆನ್ನಲಾದ ತಿಂಗಳ ಹಿಂದಿನ ವಿಡಿಯೋವೊಂದು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಆಗಿದ್ದೇನು?:
ಸಿಂಗನಾಳ ಗ್ರಾಮದ ಶಿವಬಸಪ್ಪ ಕುಂಟೋಜಿ ಮತ್ತು ವೀರಭದ್ರಪ್ಪ ಹೊಸಕೇರಿ ಅವರ ನಡುವಿನ ಭೂ ವಿವಾದದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದ್ದ ಹಿನ್ನೆಲೆಯಲ್ಲಿ ಏ.೨೨ ರಂದು ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ತೀವ್ರ ತಿಕ್ಕಾಟ, ನೂಕು ನುಗ್ಗಲು ಆಗಿದ್ದು ಆಗ ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್‌ಐ ಪ್ರಕಾಶ್ ಮಾಳೆ ಅವರು ತಮ್ಮ ಬೂಟ್ ಕೈಯಲ್ಲಿ ಎತ್ತಿಕೊಂಡು ಹೊಡೆದಂತೆ ಕಾಣಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಂದು ಈ ಘಟನೆಯನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿಕೊಂಡು ಶುಕ್ರವಾರ ಹರಿಬಿಟ್ಟ ಹಿನ್ನೆಲೆಯಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.
ನಾನು ಹೊಡೆದೇ ಇಲ್ಲ: ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪಿಎಸ್‌ಐ ಪ್ರಕಾಶ್, ಬೂಟ್‌ನಿಂದ ಹೊಡೆದ ಆರೋಪವನ್ನು ತಳ್ಳಿಹಾಕಿದ್ದಾರೆ. ಬೂಟಿನಿಂದ ಹೊಡೆದೇ ಇಲ್ಲ. ಘರ್ಷಣೆ ಸಂದರ್ಭದಲ್ಲಿ ಶೂ ಹಾಗೂ ಟೋಪಿ ಜಾರಿ ಬಿದ್ದಿದ್ದು, ಅದನ್ನು ಎತ್ತುವ ಸಂದರ್ಭದಲ್ಲಿ ಪರಸ್ಪರ ತಳ್ಳಾಟ, ನೂಕಾಟ ನಡೆದಾಗ ಶೂ ಇದ್ದ ಕೈ ಮೇಲಕ್ಕೆ ಹೋಗಿತ್ತೆಂದು ಹೇಳಿದ್ದಾರೆ.
