Asianet Suvarna News Asianet Suvarna News

ಸ್ವಾವಲಂಬನೆಗೆ ಹೆಗಲು ಕೊಟ್ಟ ಪೋರ

ದಿನನಿತ್ಯ ಬೆಳಗ್ಗೆ, ಸಂಜೆ ಟೀ ಮಾರುವ ಕಾಯಕ, ದುಡಿಮೆಯೊಂದಿಗೆ ವಿದ್ಯಾಭ್ಯಾಸಕ್ಕೂ ಸೈ | ಬಡತನದಲ್ಲಿ ಅರಳಿದ ಪ್ರತಿಭೆ ಮಹಾಂತೇಶ | ವೈದ್ಯನಾಗುವ ಮಹದಾಸೆ | ₹ 200 ಸಂಪಾದನೆ

Koppal Tea Boy Shows The Way of Self Dependency
Author
First Published Oct 9, 2017, 6:13 PM IST
  • Facebook
  • Twitter
  • Whatsapp

ಕೊಪ್ಪಳ: ಕಿತ್ತು ತಿನ್ನುವ ಬಡತನದ ಮಧ್ಯೆ ವೈದ್ಯನಾಗಬೇಕೆಂಬ ಕನಸು ಹೊತ್ತಿರುವ ಇಲ್ಲಿಯ ಬಡ ವಿದ್ಯಾರ್ಥಿಯೊಬ್ಬ ಚಿಕ್ಕವಯಸ್ಸಿನಲ್ಲೇ ಸ್ವಾವಲಂಬನೆ ಬದುಕಿಗೆ ಹೆಗಲು ಕೊಟ್ಟಿದ್ದಾನೆ.

ಬಡತನದ ಬೇಗೆಯಲ್ಲಿ ಬೆಂದಿರುವ ನಗರದ ಮುಚಿಗೇರ ಓಣಿಯ ಮಹಾಂತೇಶ ಬೈಲ್‌ಪತ್ತಾರ, ಓದಿನೊಂದಿಗೆ ಬೆಳಗ್ಗೆ ಹಾಗೂ ಸಂಜೆ ಟೀ ಮಾರುವ ಕಾಯಕದಲ್ಲಿ ನಿರತನಾಗಿದ್ದಾನೆ. ಬರುವ ಆದಾಯದಲ್ಲೆ ಮನೆಗೆ ಸ್ವಲ್ಪ ಹಣ ನೀಡುವ ಮೂಲಕ ವಿದ್ಯಾಭ್ಯಾಸದ ಖರ್ಚು-ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುತ್ತಿರುವುದು ವಿಶೇಷ. ಈ ಪೋರ ನಗರದ ಕೋಟೆ ಏರಿಯಾದ ಹತ್ತಿರವಿರುವ ಬ್ರಹ್ಮನವಾಡಿ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಅಧ್ಯಯನ ಮಾಡುತ್ತಿದ್ದು, ಓದಿನೊಂದಿಗೆ ಕುಟುಂಬಕ್ಕೆ ಸಹಕಾರಿಯಾಗಿದ್ದಾನೆ.

ಟೀ ಮಾರುವ ಕಾಯಕ:ಈ ಬಾಲಕನ ತಂದೆ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ತನ್ನ ತಾಯಿ ಭೀಮಮ್ಮ ಅವರೊಂದಿಗೆ ದುಡಿಮೆ ಮಾಡುತ್ತಲೇ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಇವರ ಮನೆಯಲ್ಲಿರುವ ಅಜ್ಜಿ ಬೆಳಗ್ಗೆ ಹಾಗೂ ಸಂಜೆ ಮಹಾಂತೇಶನಿಗೆ ಟೀ ತಯಾರಿಸಿ ಕೊಡುತ್ತಾರೆ. ಬೆಳಗ್ಗೆ 6ಕ್ಕೆ ಮಹಾಂತೇಶನ ದಿನಚರಿ ಪ್ರಾರಂಭವಾಗುತ್ತದೆ. ನಗರದ ವಿವಿಧೆಡೆ ಸಂಚರಿಸಿ 8.30ರವರೆಗೆ ಟೀ ಮಾರುತ್ತಾನೆ. ಆನಂತರ ಶಾಲೆಗೆ ತೆರಳುತ್ತಾನೆ. ಶಾಲೆ ಬಿಟ್ಟ ಮೇಲೆ ಸಂಜೆ 7ರ ವರೆಗೆ ಟೀ ಮಾರಿ ನಿತ್ಯ ₹ 300 ಸಂಪಾದಿಸುತ್ತಾನೆ. ಅದರಲ್ಲಿ ಟೀ ಮಾಡುವುದಕ್ಕೆ ₹ 100 ತೆಗೆದರೂ ₹ 200 ಆದಾಯ ಉಳಿಯುತ್ತಿದೆ.

ಬಡತನದಲ್ಲಿ ಅರಳಿದ ಪ್ರತಿಭೆ: ತೀವ್ರ ಸಂಕಷ್ಟದಲ್ಲಿರುವ ಇವರ ಕುಟುಂಬಕ್ಕೆ ದುಡಿಮೆಯೆ ಆಸರೆ. ಮಹಾಂತೇಶನ ತಾಯಿ ಭೀಮವ್ವ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಕ್ಕಳೊಂದಿಗೆ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಅದರೊಂದಿಗೆ ಮಕ್ಕಳಿಗೂ ಸಣ್ಣ ಪುಟ್ಟ ಕೆಲಸಗಳನ್ನು ನೀಡಿ ಜೀವನ ಸರಿದೂಗಿಸುವುದರೊಂದಿಗೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಓದಿನಲ್ಲೂ ಮುಂದು: ಓದಿನಲ್ಲಿಯೂ ಮುಂದಿರುವ ಮಹಾಂತೇಶ, ಶಾಲಾ ಚಟುವಟಿಕೆಯಲ್ಲೂ ಸೈ ಎನಿಸಿಕೊಂಡಿದ್ದಾನೆ. ದಿನನಿತ್ಯ ಕೆಲಸದೊಂದಿಗೆ ಶಾಲೆಯಲ್ಲಿ ಗುರುಗಳು ಹೇಳಿದ ಪಾಠವನ್ನು ಮನೆಯಲ್ಲಿ ರಾತ್ರಿ ಅಭ್ಯಾಸ ಮಾಡುತ್ತಾನೆ. ಆ ಮೂಲಕ ಓದಿನಲ್ಲಿಯೂ ಮುಂದಿದ್ದು, ಜಾಣ್ಮೆ ತೋರುತ್ತಿದ್ದಾನೆ. ಏನೆಲ್ಲ ಸೌಕರ್ಯಗಳನ್ನು ನೀಡಿದರೂ ಓದಿನಲ್ಲಿ ನಮ್ಮ ಮಕ್ಕಳು ಹಿಂದುಳಿಯುತ್ತಾರೆ ಎಂದು ಹಲವು ಪಾಲಕರು ಗೊಣಗುತ್ತಾರೆ. ಅಂಥವರು ಮಹಾಂತೇಶನನ್ನು ನೋಡಿ ಅಚ್ಚರಿ ಪಡುತ್ತಿದ್ದಾರೆ.

Follow Us:
Download App:
  • android
  • ios