ಕೋಲ್ಕತಾ[ಜು.09]: ಕೋಲ್ಕತಾದ ಕುಟುಂಬವೊಂದು 82 ವರ್ಷದ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸದೇ ಶವವನ್ನು ಮೂರ್ನಾಲ್ಕು ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ 6 ತಿಂಗಳ ಹಿಂದೆ ಈ ಮಹಿಳೆಯ ಮಗ ಸಾವನ್ನಪ್ಪಿದ ಸಂದರ್ಭದಲ್ಲೂ ಕುಟುಂಬ ಸದಸ್ಯರು ಶವಸಂಸ್ಕಾರ ನಡೆಸದೇ ಮನೆಯಲ್ಲೇ ಇಟ್ಟುಕೊಂಡಿದ್ದರು. ಕೊಳೆತ ವಾಸನೆ ಬಂದು ಪಕ್ಕದ ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಮತ್ತೊಮ್ಮೆ ಮನೆಯಲ್ಲಿ ಇಂತಹುದೇ ಘಟನೆ ಮರುಕಳಿಸಿದೆ.

ಆಗಿದ್ದೇನು?

ದಕ್ಷಿಣ ಕೋಲ್ಕತಾದ ಸರ್ಸುನಾ ಪ್ರದೇಶದಲ್ಲಿರುವ ಮನೆಯ ಕೆಲ ದಿನಗಳ ಹಿಂದೆ ಛಾಯಾ ಚಟರ್ಜಿ (82) ಎಂಬಾಕೆ ಅಸುನೀಗಿದ್ದರು. ಆದರೆ, ಆಕೆಯ ಜೊತೆ ವಾಸಿಸುತ್ತಿದ್ದ ಪತಿ ರಬಿಂದ್ರನಾಥ್‌ ಚಟರ್ಜಿ ಹಾಗೂ ಪುತ್ರಿ ನೀಲಾಂಜನಾ ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಮಹಿಳೆಯ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿರಲಿಲ್ಲ. ಮನೆಯಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿ ಪಕ್ಕದ ಮನೆಯವರು ದೂರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ಮಹಿಳೆಯ ಶವವನ್ನು ವಶಪಡಿಸಿಕೊಂಡಿದ್ದು, ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.