ಸುಂಟಿಕೊಪ್ಪ : ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಬೀದಿಗೆ ಬಿದ್ದಿದ್ದ ಸಂತ್ರಸ್ತರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿ ಸಾಂತ್ವನ ಹೇಳಿ, ಮನೆ ತೋಟ ಕಳಕೊಂಡವರಿಗೆ ಪರಿಹಾರ ಘೋಷಿಸಿದ್ದರು. ಅಲ್ಲದೇ ತಾತ್ಕಾಲಿಕವಾಗಿ ಸಂತ್ರಸ್ತರಿಗೆ ತಲಾ 3,800 ಪರಿಹಾರ ಘೋಷಿಸಿದ್ದರು. ಆದರೆ ತಾತ್ಕಾಲಿಕ ಪರಿಹಾರ ಹಣ ಹಲವರಿಗೆ ಸಿಗದ ವಿಷಯ ಬೆಳಕಿಗೆ ಬಂದಿದೆ. 

ಪುನರ್ವಸತಿ ಕೇಂದ್ರಗಳನ್ನು ತೊರೆದು ಮನೆಗಳಿಗೆ ತೆರಳುವ ಸಂತ್ರಸ್ತರಿಗೆ ತಿಂಗಳಿಗೆ ಸರಿದೂಗಿಸುವಷ್ಟು ದವಸ ಧಾನ್ಯ, 3,800 ಕಡ್ಡಾಯವಾಗಿ ನೀಡುವಂತೆ ಸರ್ಕಾರ, ಜಿಲ್ಲಾಡಳಿತ ಆದೇಶ ನೀಡಿದೆ. ಆದರೂ ಪುನರ್ವಸತಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ನೈಜ ನಿರಾಶ್ರಿತರಿಗೆ ಸರ್ಕಾರ ಘೋಷಿಸಿರುವ ಆಹಾರ ಮತ್ತು ಧನ ಸಹಾಯ ದೊರೆತಿಲ್ಲ.

ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯಲ್ಲಿ ಮನೆ, ತೋಟ, ಗದ್ದೆ ಕಳೆದುಕೊಂಡ ಪಿ.ಟಿ.ಬಿದ್ದಪ್ಪ, ಸೋಮವಾರ ಪೇಟೆ ಕೊಡವ ಸಮಾಜದ ಪುನರ್ವಸತಿ ಕೇಂದ್ರದಲ್ಲಿದ್ದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದ ಪಾಸುರ ಎನ್.ಲೋಕೇಶ್, ಎಂ.ಎ.ಮೇದಪ್ಪ, ಪಿ.ಸಿ.ಚಂಗಪ್ಪ ಅವರಿಗೆ ಸರ್ಕಾರದ ಪರಿಹಾರ ಸಿಕ್ಕಿಲ್ಲ.

ಶಿರಂಗಳ್ಳಿ ಗ್ರಾಮಕ್ಕೆ ಮಾದಾಪುರದಿಂದ ತೆರಳುವ ರಸ್ತೆ ಕುಸಿದು ಬಿದ್ದಿದೆ. ಸೂರ್ಲಬ್ಬಿಯಿಂದಲೂ ಶಿರಂಗಳ್ಳಿಗೆ ರಸ್ತೆ ಸಂಪರ್ಕ ಇಲ್ಲದಾಗಿದೆ. ಒಟ್ಟಾರೆ ಶಿರಂಗಳ್ಳಿ ಗರ್ವಾಲೆ ಗ್ರಾಮಸ್ಥರಿಗೆ ಇರುವ ವಾಸದ ಮನೆಗಳಿಗೆ ತೆರಳಲು ಆಗದೇ ಕುಟುಂಬ ಸಮೇತ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ. ಕೂಡಲೇ ಈ ವಿಭಾಗದ ರೈತರಿಗೆ ಕಂದಾಯ, ಕೃಷಿ ಇಲಾಖೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.