ಮಡಿಕೇರಿ (ಸೆ. 04): ‘ಮದ್ಯಪ್ರಿಯರ ನಾಡು’ ಎಂದು ಕರೆಸಿಕೊಳ್ಳುತ್ತಿದ್ದ, ಮದ್ಯ ಖರೀದಿಯಲ್ಲಿ ರಾಜ್ಯಕ್ಕೆ ನಂಬರ್‌ ಒನ್‌ ಸ್ಥಾನದಲ್ಲಿದ್ದ ಕೊಡಗು ನಂ.30ಕ್ಕೆ ಕುಸಿದಿದೆ.

ಚಿಕ್ಕ ಜಿಲ್ಲೆಯಾದರೂ ಜಿಲ್ಲೆಯ ಜನರದಲ್ಲಿ ಮದ್ಯ ಸೇವನೆ ಸಾಮಾನ್ಯ. ಅಲ್ಲದೇ ಬಹುತೇಕ ಮಂದಿ ಮದ್ಯ ಪ್ರಿಯರು. ಅಷ್ಟೇ ಅಲ್ಲದೆ ಜಿಲ್ಲೆಗೆ ಮೋಜು- ಮಸ್ತಿಗಾಗಿ ರಾಜ್ಯದ ವಿವಿಧೆಡೆಯಿಂದ ಬರುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಹೆಚ್ಚು. ಇದರಿಂದ ಕೊಡಗಿನಲ್ಲಿ ಮದ್ಯ ಮಾರಾಟದಲ್ಲಿ ಕಳೆದ ವರ್ಷ ರಾಜ್ಯದಲ್ಲಿಯೇ ನಂ.1 ಸ್ಥಾನದಲ್ಲಿತ್ತು. ಆದರೆ ಪ್ರಕೃತಿ ವಿಕೋಪ ಕೊಡಗಿನ ಜನತೆಯನ್ನು ಹಿಂಡಿ ಹಿಪ್ಪೆ ಮಾಡಿತು.

ನೆರೆಯಿಂದಾಗಿ ಕೆಲ ಕಾಫಿ ತೋಟದ ಮಾಲಿಕರು, ಕೆಲಸಗಾರರು ಮನೆಗಳನ್ನು ತೊರೆದು, ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದರು. ಅಲ್ಲಿ ಹಣವಿಲ್ಲದೇ, ಮದ್ಯ ಖರೀದಿಸಲು ಆಗದೇ ಸುಮ್ಮನಿದ್ದಾರೆ. ಇದು ಮದ್ಯ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ, ಇತ್ತ ಜಿಲ್ಲಾಡಳಿತವೂ ಜಿಲ್ಲೆಗೆ ಪ್ರವಾಸಿಗರ ಆಗಮನವನ್ನು ಆ.15ರಿಂದ ನಿಷೇಧಿಸಿದೆ. ಹೋಂಸ್ಟೇ, ರೆಸಾರ್ಟ್‌ ಹಾಗೂ ಹೊಟೇಲ್‌ಗಳು ಬಂದ್‌ ಆಗಿರುವುದರಿಂದ ಜಿಲ್ಲೆಯಲ್ಲಿ ಮದ್ಯ ವಹಿವಾಟು ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದೆ.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟಸಂಭವಿಸಿದೆ. ಹೋಂಸ್ಟೇ, ರೆಸಾರ್ಟ್‌ ಹಾಗೂ ಹೊಟೇಲ್‌ಗಳನ್ನು ಬಂದ್‌ ಮಾಡಲಾಗಿರುವುದರಿಂದ ಮದ್ಯ ಮಾರಾಟದಲ್ಲೂ ಕೊಡಗು ಕೊನೆಯ ಸ್ಥಾನ ಅಲಂಕರಿಸಿದೆ. ಕಳೆದ ವರ್ಷ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ, ಈ ಬಾರಿ ಮದ್ಯ ವಹಿವಾಟಿನಲ್ಲಿ 30ನೇ ಸ್ಥಾನಕ್ಕೆ ಇಳಿದಿದೆ.

ಆಗಸ್ಟ್‌ನಲ್ಲೇ ಹೆಚ್ಚು ನಷ್ಟ:

ಆಗಸ್ಟ್‌ ತಿಂಗಳಲ್ಲಿ ಮದ್ಯ ವಹಿವಾಟು ಗಣನೀಯ ಪ್ರಮಾಣದಲ್ಲಿ ಇಳಿಮುಖಗೊಂಡಿದೆ. ಕೊಡಗಿನಲ್ಲಿ ಆಗಸ್ಟ್‌ನಲ್ಲಿ 1,22,143 ಮದ್ಯದ ಪೆಟ್ಟಿಗೆ (10.55 ಲಕ್ಷ ಲೀಟರ್‌) ಮಾರಾಟಕ್ಕೆ ಗುರಿ ನೀಡಲಾಗಿತ್ತು. ಆದರೆ 67,116 ಮದ್ಯದ ಪೆಟ್ಟಿಗೆ (5.79 ಲಕ್ಷ ಲೀಟರ್‌)ನಷ್ಟುಮಾತ್ರ ಮಾರಾಟವಾಗಿದ್ದು, ಶೇ.55ರಷ್ಟುಮಾತ್ರ ಸಾಧನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 76,670 ಮದ್ಯದ ಪೆಟ್ಟಿಗೆ ಮಾರಾಟವಾಗಿ ಶೇ.90ರಷ್ಟುಪ್ರಗತಿ ಸಾಧಿಸಲಾಗಿತ್ತು.

ಗುರಿಯಷ್ಟುಸಾಧನೆ ಇಲ್ಲ:

ಕೊಡಗು ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್‌ನಿಂದ ಆಗಸ್ಟ್‌ ವರೆಗೆ 4,60,941 ಮದ್ಯದ ಪೆಟ್ಟಿಗಳು (39.82 ಲಕ್ಷ ಲೀಟರ್‌) ಮಾರಾಟವಾಗಬೇಕಿತ್ತು. ಆದರೆ ಈ ಬಾರಿ 3,96,047 ಪೆಟ್ಟಿಗೆಗಳು (34.21 ಲಕ್ಷ ಲೀಟರ್‌) ಮಾತ್ರ ಮಾರಾಟವಾಗಿದ್ದು, ಶೇ.86ರಷ್ಟುಸಾಧನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,46,625 ಗುರಿಯಲ್ಲಿ 4,10,197 ಮದ್ಯದ ಪೆಟ್ಟಿಗೆಗಳು ಮಾರಾಟವಾಗಿ ಶೇ.92ರಷ್ಟುಪ್ರಗತಿ ಸಾಧಿಸಲಾಗಿತ್ತು.

ಸಂತ್ರಸ್ತರ ಪಾಡು:

ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವವರು ಹಾಗೂ ಮಾಲಿಕರಲ್ಲಿ ಬಹುತೇಕರು ಮದ್ಯ ಸೇವನೆ ಮಾಡುವವರು. ಆದರೆ ಈಗ ಮನೆ, ಮಠ, ತೋಟಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ತಂಗಿದ್ದಾರೆ. ಕೆಲವು ಸಂತ್ರಸ್ತರು ಕೈಯಲ್ಲಿ ದುಡ್ಡಿಲ್ಲದೆ ಮದ್ಯ ಸೇವನೆಗೆ ಪರದಾಡುತ್ತಿರುವುದು ಸಾಮಾನ್ಯವಾಗಿದೆ.

ಅಪಾರ ನಷ್ಟ:

ಕೊಡಗು ಜಿಲ್ಲೆಯಲ್ಲಿ ಮೋಜು ಮಸ್ತಿ ಮಾಡಲೆಂದೇ ಕೆಲವು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಈಗ ಕೊಡಗಿನ ಚಿತ್ರಣ ಬದಲಾಗಿದೆ. ಹೋಂಸ್ಟೇ, ರೆಸಾರ್ಟ್‌ ಹಾಗೂ ಹೊಟೇಲ್‌ಗಳಿಗೆ ಕೋಟ್ಯಂತರ ರುಪಾಯಿ ನಷ್ಟಅಂದಾಜಿಸಲಾಗಿದೆ.

- ವಿಘ್ನೇಶ್ ಎಂ ಭೂತನಕಾಡು