ಮೊದಲ ಹಂತವಾಗಿ ಮುಂಬೈನಿಂದ ಆರಂಭಗೊಂಡು ಗೋವಾ, ಹಂಪಿ, ಮೈಸೂರು, ಮಹಾಬಲಿಪುರಂ, ಚೆಟ್ಟಿನಾಡ್‌ ಮೂಲಕ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಲಿದೆ. ನಂತರ ಜುಲೈ 1 ರಿಂದ ಪುನಃ ತಿರುವನಂತಪುರದಿಂದ ಮುಂಬೈಗೆ ಸಾಗಲಿದೆ. ಈವರೆಗೆ ವಿದೇಶೀಯರಿಗೆ ಐಷಾರಾಮಿ ಅನುಭವ ನೀಡುತ್ತಿದ್ದ ಈ ರೈಲು ಮುಖ್ಯವಾಗಿ ದೇಶೀಯ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾಗುತ್ತಿದೆ.
ಬೆಂಗಳೂರು: ಭಾರತೀಯ ರೈಲ್ವೆ ಸಾರ್ವಜನಿಕ ವಿಭಾಗ, ಐಆರ್'ಸಿಟಿಸಿಯಿಂದ ದೇಶೀಯ ಪ್ರವಾಸಿಗರಿಗಾಗಿ ಜೂ.24 ರಿಂದ ದಕ್ಷಿಣ ಭಾರತದ ಐತಿಹಾಸಿಕ ಸ್ಥಳಗಳಿಗೆ ‘ದಕ್ಷಿಣದ ಆಭರಣಗಳು' ಎಂಬ ಹೆಸರಿನಲ್ಲಿ ಐಷಾರಾಮಿ ರೈಲು ಸಂಚರಿಸಲಿದೆ ಎಂದು ಸಂಸ್ಥೆ ನಿರ್ದೇಶಕ ಎಸ್.ಎಸ್. ಜಗನ್ನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010 ರಿಂದ ವಿದೇಶಿ ಪ್ರವಾಸಿಗರಿಗೆ ಭಾರತದ ಉತ್ತರದಿಂದ ಪಶ್ಚಿಮದಲ್ಲಿರುವ ಐತಿಹಾಸಿಕ ಪ್ರದೇಶಗಳಿಗೆ ಐಷಾರಾಮಿ ಪ್ರಯಾಣ ಒದಗಿಸುತ್ತಿದ್ದ ಮಹಾರಾಜ ಎಕ್ಸ್'ಪ್ರೆಸ್ ರೈಲು, ಇದೀಗ ‘ದಕ್ಷಿಣ ಆಭರಣಗಳು‘ ಎಂಬ ಹೆಸರಿನೊಂದಿಗೆ ದಕ್ಷಿಣ ಭಾರತದಲ್ಲಿ ಕಾರ್ಯಪ್ರವೃತ್ತವಾಗಲಿದೆ. 8 ಹಗಲು 7 ರಾತ್ರಿ ಓಡಾಡುವ ಈ ರೈಲು ಇದೇ ತಿಂಗಳ 24 ರಿಂದ ತನ್ನ ಸೇವೆ ಪ್ರಾರಂಭಿಸಲಿದ್ದು, ಜೂ. 26ಕ್ಕೆ ಹಂಪಿ ತಲುಪಲಿದೆ ಎಂದು ಹೇಳಿದರು.
ಮೊದಲ ಹಂತವಾಗಿ ಮುಂಬೈನಿಂದ ಆರಂಭಗೊಂಡು ಗೋವಾ, ಹಂಪಿ, ಮೈಸೂರು, ಮಹಾಬಲಿಪುರಂ, ಚೆಟ್ಟಿನಾಡ್ ಮೂಲಕ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಲಿದೆ. ನಂತರ ಜುಲೈ 1 ರಿಂದ ಪುನಃ ತಿರುವನಂತಪುರದಿಂದ ಮುಂಬೈಗೆ ಸಾಗಲಿದೆ. ಈವರೆಗೆ ವಿದೇಶೀಯರಿಗೆ ಐಷಾರಾಮಿ ಅನುಭವ ನೀಡುತ್ತಿದ್ದ ಈ ರೈಲು ಮುಖ್ಯವಾಗಿ ದೇಶೀಯ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವುದು ಇದರ ಮೂಲ ಉದ್ದೇಶ ಎಂದರು.
ಒಂದು ಉಚಿತ ಟಿಕೆಟ್: ಇದರಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನಾಲ್ಕು ಸ್ತರದ ಪ್ರಯಾಣ ದರವಿದ್ದು, ನೂತನವಾಗಿ ಸೇವೆ ಆರಂಭಿಸಿರುವುದರಿಂದ ಮೊದಲ ಪ್ರಯಾಣಿಕರಿಗೆ ಒಂದು ಟಿಕೆಟ್ಗೆ ಒಂದು ಟಿಕೆಟ್ ಉಚಿತವಾಗಿ ನೀಡಲಾಗುವುದು. ರೈಲಿನಲ್ಲಿ ಎಲ್ಲಾ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯಗಳು ದೊರಕಲಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ಅನೂಪ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಐಷಾರಾಮಿ ರೈಲು ಇದು:
ಸುಮಾರು 23 ಬೋಗಿಗಳನ್ನು ಹೊಂದಿರುವ ಈ ರೈಲು ಕೇವಲ 88 ಜನ ಪ್ರಯಾಣಿಕರನ್ನು ಕರೆದೊಯ್ಯಲಿದೆ. ಐಷಾರಾಮಿ ಹೋಟೆಲುಗಳನ್ನು ಮೀರಿಸುವ ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವೈಫೈ ಸೌಲಭ್ಯ, ಎರಡು ಐಷಾರಾಮಿ ರೆಸ್ಟೋರೆಂಟ್, ಗ್ರಂಥಾಲಯ, ಸ್ಪಾ, ಎರಡು ಬಾರ್ಗಳು ಸಹ ಇದರಲ್ಲಿದೆ. ಇದರ ಪ್ರಯಾಣ ದರ ಒಂದು ದಿನಕ್ಕೆ .33,250 ರಿಂದ ಪ್ರಾರಂಭಗೊಳ್ಳಲಿದ್ದು, ಭಾರತೀಯ ರುಪಾಯಿಗಳಲ್ಲಿ ಮಾತ್ರ ದರವನ್ನು ಸ್ವೀಕರಿಸಲಾಗುವುದು. ವಿದೇಶಿ ಹಣವನ್ನು ಸ್ವೀಕರಿಸುವುದಿಲ್ಲ.
ಕನ್ನಡಪ್ರಭ ವಾರ್ತೆ
epaper.kannadaprabha.in
