ಬೆಂಗಳೂರು [ಆ.30]:  ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌)ದ ಅಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್‌ನ 11 ನಿರ್ದೇಶಕರನ್ನು ಅಜ್ಞಾತ ಸ್ಥಳಕ್ಕೆ ರವಾನಿಸುವುದರೊಂದಿಗೆ ಚುನಾವಣೆ ರೋಚಕ ಘಟ್ಟಮುಟ್ಟಿದೆ.

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಆ.31) ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಎಂಟು ನಿರ್ದೇಶಕರು ಸೇರಿದಂತೆ ಒಟ್ಟು 11 ಮಂದಿ ನಿರ್ದೇಶಕರನ್ನು ಬಾಲಚಂದ್ರ ಜಾರಕಿಹೊಳಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಹೀಗಾಗಿ 16 ಮತಗಳ ಪೈಕಿ 12 ಮತಗಳ ಬೆಂಬಲ ಬಾಲಚಂದ್ರ ಜಾರಕಿಹೊಳಿ ಅವರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಇದರಿಂದಾಗಿ ಅವರ ಗೆಲುವು ಬಹುತೇಕ ನಿಶ್ಚಿತ ಎನ್ನಲಾಗಿದೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕುತೂಹಲಕಾರಿ ಸಂಗತಿಯೆಂದರೆ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್‌ ಶಾಸಕ ಭೀಮಾ ನಾಯ್‌್ಕ ಸಹ ಇದೀಗ ಜಾರಕಿಹೊಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇವರಲ್ಲದೆ, ಕಾಂಗ್ರೆಸ್‌ ಬೆಂಬಲಿತ 8 ನಿರ್ದೇಶಕರು, ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಓರ್ವ ನಿರ್ದೇಶಕರು ಬಾಲಚಂದ್ರ ಜಾರಕಿಹೊಳಿ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ. ಅಲ್ಲದೇ ಮಂಡ್ಯ ಹೊರತುಪಡಿಸಿ ತುಮಕೂರು ಹಾಲು ಒಕ್ಕೂಟದ ಓರ್ವ ನಿರ್ದೇಶಕನಿಗೆ ಹೈಕೋರ್ಟ್‌ ಮುಚ್ಚಿದ ಲಕೋಟೆಯಲ್ಲಿ ಮತದಾನಕ್ಕೆ ಅವಕಾಶ ನೀಡಿದ್ದು (ಆ ಮತದ ಮಾನ್ಯತೆಯು ನ್ಯಾಯಾಲಯದ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ), ಅವರ ಬೆಂಬಲ ಕೂಡ ಜಾರಕಿಹೊಳಿಗೆ ಸಿಗಲಿದೆ ಎನ್ನಲಾಗಿದೆ. ಉಳಿದಂತೆ ಪಶುಸಂಗೋಪನೆ ಅಧಿಕಾರಿ, ಸಹಕಾರ ಇಲಾಖೆ ರಿಜಿಸ್ಟ್ರಾರ್‌ ಮತ್ತು ಸರ್ಕಾರದ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಲಿದ್ದಾರೆ.

ಅಧ್ಯಕ್ಷ ಆಕಾಂಕ್ಷಿಯಿಂದಲೂ ಬೆಂಬಲ:

ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬೆಂಬಲಿಸುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಕಾಂಗ್ರೆಸ್‌ ಶಾಸಕ ಭೀಮಾನಾಯ್ಕ್ ಅವರಲ್ಲಿ ಮನವಿ ಮಾಡಿದ್ದರು. ಈ ವೇಳೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೂ ಜಾರಕಿಹೊಳಿ ಅಧ್ಯಕ್ಷರಾಗಿ ಮುಂದುವರೆಯಬೇಕು, ನಂತರ ಭೀಮಾನಾಯ್ಕ್ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿತ್ತು ಎನ್ನಲಾಗಿತ್ತು. ಅದಕ್ಕೆ ಬಾಲಚಂದ್ರ ಜಾರಕಿಹೊಳಿ ಸಮ್ಮತಿಸಲಿಲ್ಲ. ಅನಂತರ ಐದು ವರ್ಷ ಅಧಿಕಾರಾವಧಿ ಹೊಂದಿರುವ ಕೆಎಂಎಫ್‌ ಅಧ್ಯಕ್ಷ ಹುದ್ದೆಯನ್ನು ತಲಾ ಎರಡೂವರೆ ವರ್ಷದಂತೆ ಇಬ್ಬರು ಹಂಚಿಕೊಳ್ಳುವ ಪ್ರಸ್ತಾಪವನ್ನು ಬಾಲಚಂದ್ರ ಜಾರಕಿಹೊಳಿ ಮುಂದಿಡಲಾಗಿದ್ದು, ಇದಕ್ಕೂ ಅವರು ನಿರಾಕರಿಸಿದ್ದಾರೆ. ಅಂತಿಮವಾಗಿ ಸಂಸ್ಥೆಯಲ್ಲಿ ಭೀಮಾನಾಯ್ಕ್ ಅವರ ಅಗತ್ಯ ಕೆಲಸಗಳನ್ನು ಮಾಡಿಕೊಡುವ ಒಪ್ಪಂದ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಜಾರಕಿಹೊಳಿಗೆ ಭೀಮಾನಾಯ್ಕ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರೇವಣ್ಣಗೆ ಈಗ ಬೆಂಬಲವೇ ಇಲ್ಲ:

ಮೈತ್ರಿ ಸರ್ಕಾರದ ಅವಧಿಯಲ್ಲಿ ಸೂಪರ್‌ ಸಿಎಂ ಎಂದೇ ಕರೆಸಿಕೊಂಡಿದ್ದ ರೇವಣ್ಣ ಅವರು ಎರಡು ಅವಧಿಯಲ್ಲಿ ಕೆಎಂಎಫ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಶಾಸಕ ಭೀಮಾನಾಯ್ಕ್ ಅವರಿಗೆ ಕೆಎಂಎಫ್‌ ಅಧ್ಯಕ್ಷಗಿರಿ ಕೈತಪ್ಪುವಂತೆ ಮಾಡಲು ರೇವಣ್ಣ ಎಂಟು ಮಂದಿ ನಿರ್ದೇಶಕರನ್ನು ಹೈದರಾಬಾದ್‌ಗೆ ಕರೆದೊಯ್ದಿದ್ದರು. ಸರ್ಕಾರದ ಬೆಂಬಲ ಮತ್ತು ತಮ್ಮ ಪ್ರಭಾವ ಬಳಸಿ ಮತ್ತೊಮ್ಮೆ ಕೆಎಂಎಫ್‌ ಅಧ್ಯಕ್ಷರಾಗಲು ಸರ್ವ ಸಿದ್ಧತೆ ಮಾಡಿಕೊಂಡಿದ್ದರು.

ಈಗ ಸರ್ಕಾರ ಬದಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಬದಲಾಗಿದ್ದಾರೆ. ರೇವಣ್ಣ ಅವರ ತಂತ್ರವನ್ನೇ ತಿರುಗು ಬಾಣ ಮಾಡಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಚುನಾವಣೆ ಘೋಷಣೆಯಾಗುತ್ತಿದ್ದಂತೆ 11 ಮಂದಿ ನಿರ್ದೇಶಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದು, ಪ್ರತಿಸ್ಪರ್ಧಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಕಲಬುರಗಿ ಹಾಲು ಒಕ್ಕೂಟದ ನಿರ್ದೇಶಕ ಮಾಲತೇಶ ಕಾಂಶಪೂರ್‌ ಅವರನ್ನು ಹೊರತುಪಡಿಸಿ ರೇವಣ್ಣ ಅವರಿಗೆ ಬೆಂಬಲಿಸುವ ನಿರ್ದೇಶಕರೇ ಇಲ್ಲದಂತಾಗಿದೆ.

ಆದರೂ ರಾಜಕೀಯ ಪಟ್ಟುಗಳ ಅನುಭವ ಇರುವ ಮಾಜಿ ಸಚಿವ ರೇವಣ್ಣ ಅವರು ಕೊನೆಯ ಕ್ಷಣದಲ್ಲಿ ಯಾವುದಾದರೂ ಮ್ಯಾಜಿಕ್‌ ಮಾಡುತ್ತಾರೋ ಅಥವಾ ಶನಿವಾರ ನಡೆಯಲಿರುವ ಕೆಎಂಎಫ್‌ ಚುನಾವಣೆಯಿಂದ ಹಿಂದೆ ಸರಿಯುವರೋ ಎಂಬುದಷ್ಟೇ ಇದೀಗ ಉಳಿದಿರುವ ಕುತೂಹಲ.