Asianet Suvarna News Asianet Suvarna News

ವಿದೇಶದಲ್ಲಿ ಅಡಗಿದ್ದಾನೆ ಕಲಬುರ್ಗಿ ಹಂತಕ!: ಸಿಐಡಿ ಇತಿಹಾಸದಲ್ಲೇ ‘ಅತ್ಯಂತ ದೊಡ್ಡ ಮಾನವ ಬೇಟೆ' ಪರಮೇಶ್ವರ್

ಚಿಂತಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಕಾರಣನಾದ ಪ್ರಮುಖ ಆರೋಪಿ ವಿದೇಶದಲ್ಲಿ ಅಡಗಿರುವ ಮಾಹಿತಿ ಇದ್ದು, ಈ ಬಗ್ಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣದ ತನಿಖೆ ಸಿಐಡಿ ಇತಿಹಾಸದಲ್ಲೇ ‘ಅತ್ಯಂತ ದೊಡ್ಡ ಮಾನವ ಬೇಟೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Killer Of Scholar Dr MM Kalaburgi Is In Foreign Country Says Parameshwar
  • Facebook
  • Twitter
  • Whatsapp

ಬೆಂಗಳೂರು(ಜೂ.02): ಚಿಂತಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಕಾರಣನಾದ ಪ್ರಮುಖ ಆರೋಪಿ ವಿದೇಶದಲ್ಲಿ ಅಡಗಿರುವ ಮಾಹಿತಿ ಇದ್ದು, ಈ ಬಗ್ಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣದ ತನಿಖೆ ಸಿಐಡಿ ಇತಿಹಾಸದಲ್ಲೇ ‘ಅತ್ಯಂತ ದೊಡ್ಡ ಮಾನವ ಬೇಟೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ ನಿರ್ದೇಶನದಂತೆ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಮುನ್ನ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಕಲಬುರ್ಗಿ ಪ್ರಕರಣವನ್ನು ಭೇದಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಿಐಡಿ ಅತ್ಯಂತ ಆಳವಾದ ತನಿಖೆ ನಡೆಸುತ್ತಿದೆ. ಪ್ರಮುಖ ಆರೋಪಿಯ ಮೂಲ ವಿದೇಶದಲ್ಲಿರುವುದನ್ನೂ ಪತ್ತೆ ಮಾಡಲಾಗಿದೆ. ತನಿಖೆಯ ಸಾಕಷ್ಟುವಿವರಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಸಮರ್ಥಿಸಿಕೊಂಡರು.

ನೆರೆಯ ಮಹಾರಾಷ್ಟ್ರದಲ್ಲಿ ಹತ್ಯೆಗೀಡಾದ ಚಿಂತಕರಾದ ಧಾಬೋಲ್ಕರ್‌ ಮತ್ತು ಪಾನ್ಸರೆ ಪ್ರಕರಣದಲ್ಲಿ ಬಳಕೆಯಾದ ಬುಲೆಟ್‌ಗೂ ಹಾಗೂ ಡಾ.ಕಲಬುರ್ಗಿ ಅವರ ಹತ್ಯೆಗೆ ಬಳಸಲಾದ ಬುಲೆಟ್‌ಗೂ ಸಾಮ್ಯತೆ ಇರುವುದನ್ನು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಖಚಿತಪಡಿಸಿದ್ದಾರೆ. ಎರಡೂ ಪ್ರಕರಣಗಳಿಗೆ ಪರಸ್ಪರ ಸಂಪರ್ಕ ಇರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಾಗಿ ಇದೊಂದು ಸೂಕ್ಷ್ಮ ತನಿಖೆಯಾಗಿದ್ದು, ನಮ್ಮ ರಾಜ್ಯದ ಪೊಲೀಸರು ಪ್ರಕರಣವನ್ನು ಭೇದಿಸುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಯಾವಾಗ ಭೇದಿಸುತ್ತಾರೆ ಎಂದು ಕಾಲ ನಿಗದಿ ಮಾಡಲು ಸಾಧ್ಯವಿಲ್ಲ. ಇದೊಂದು ಅತ್ಯಂತ ಜಟಿಲ ಪ್ರಕರಣವಾಗಿದೆ ಎಂದು ಹೇಳಿದರು.

ತಾವು ಗೃಹ ಸಚಿವರಾಗಿದ್ದ ಒಂದು ವರ್ಷ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 23 ಸಾವಿರ ಪೊಲೀಸರ ಭರ್ತಿಗೆ ಚಾಲನೆ ನೀಡಲಾಗಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ತಲಾ ನಾಲ್ಕೈದು ಸಾವಿರ ಹುದ್ದೆಗಳ ನೇಮಕಾತಿ ಹಂತಹಂತವಾಗಿ ನಡೆಯಲಿದೆ. ಇದೇ ವೇಳೆ 12 ಸಾವಿರ ಪೊಲೀಸರಿಗೆ ಬಡ್ತಿ ನೀಡಲಾಗಿದೆ. ಪೇದೆಗಳಿಗೆ 2 ಸಾವಿರ ರು. ಭತ್ಯೆ ಮಂಜೂರಾತಿ ಮಾಡಿದ್ದಲ್ಲದೇ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ವೇಳೆ ಪೊಲೀಸ್‌ ಇಲಾಖೆ ಸಿಬ್ಬಂದಿ ವೇತನವನ್ನೂ ಪರಿಷ್ಕರಣೆ ಮಾಡಲು ಈಗಾಗಲೇ ಗೃಹ ಇಲಾಖೆ ರಚಿಸಿದ್ದ ಔರಾದ್‌ಕರ್‌ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಮ್ಮ ಸಾಧನೆಗಳ ಪಟ್ಟಿಮಾಡಿದರು.

ಪೊಲೀಸ್‌ ಸಿಬ್ಬಂದಿಗಾಗಿ ಪೊಲೀಸ್‌ ಗೃಹ ಯೋಜನೆಯಡಿ 11 ಸಾವಿರ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ 5 ಸಾವಿರ ಮನೆಗಳನ್ನು ನಿರ್ಮಿಸಿ, ಸಿಬ್ಬಂದಿಗೆ ಹಸ್ತಾಂತರಿಸಲಾಗಿದ್ದು, 4 ಸಾವಿರ ಮನೆಗಳ ನಿರ್ಮಾಣಕ್ಕೆ ಶೀಘ್ರ ಟೆಂಡರ್‌ ಕರೆಯಲಾಗುತ್ತದೆ. ಉಳಿದ ಮನೆಗಳನ್ನೂ ಆದಷ್ಟುಬೇಗ ನಿರ್ಮಿಸಲಾಗುವುದು. ಪೊಲೀಸ್‌ ಸಿಬ್ಬಂದಿಯ ಕ್ಷೇಮಾಭಿವೃದ್ಧಿಗಾಗಿ ತಮ್ಮ ಅವಧಿಯಲ್ಲಿ ಅತಿ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

15 ಸೆಕೆಂಡ್‌ನಲ್ಲಿ ದೂರಿಗೆ ಪ್ರತಿಕ್ರಿಯೆ ವ್ಯವಸ್ಥೆ ಶೀಘ್ರ

ಗೃಹ ಇಲಾಖೆಯಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಅಪರಾಧ ಪ್ರಕರಣ ಪತ್ತೆಗೆ ಒತ್ತು ನೀಡಲಾಗಿದೆ. ಬಹುಮುಖ್ಯವಾಗಿ ವಿದೇಶಗಳಲ್ಲಿ ಇರುವಂತೆ 100 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿದಾಗ 15 ಸೆಕೆಂಡ್‌ನಲ್ಲಿ ಅದಕ್ಕೆ ನಿಯಂತ್ರಣ ಕೊಠಡಿ ಪ್ರತಿಕ್ರಿಯೆ ನೀಡುವ ಜೊತೆಗೆ ಮುಂದಿನ 15 ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ಸೌಲಭ್ಯಕ್ಕೆ ಸಿಎಂ ಸಿದ್ದರಾಮಯ್ಯ ಶೀಘ್ರ ಚಾಲನೆ ನೀಡಲಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದರು. ಇದಲ್ಲದೇ ಒಂದು ಸಾವಿರ ಹೊಸ ಮಾದರಿ ವಾಹನಗಳನ್ನು ಕೆಎಸ್‌ಆರ್‌ಪಿ ಸಿಬ್ಬಂದಿಗೆ ಒದಗಿಸಲಾಗಿದೆ. ಗಸ್ತು ತಿರುಗುವ ಹೊಯ್ಸಳ ವಾಹನಗಳನ್ನು ಖರೀದಿಸಲಾಗಿದೆ. ಹೆದ್ದಾರಿಗಳಲ್ಲಿ ಅಪರಾಧ ತಡೆಯಲು ಹೈವೇ ಪೆಟ್ರೊಲಿಂಗ್‌ ಆರಂಭಿಸಲಾಗಿದೆ ಎಂದು ವಿವರಿಸಿದ ಅವರು, ರಾಜಕೀಯ ಕಾರಣಕ್ಕೆ ಕೊಲೆಗಳು ನಡೆದಿರುವ ಎಲ್ಲ ಪ್ರಕರಣಗಳನ್ನು ರಾಜ್ಯದ ಪೊಲೀಸರು ಭೇದಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ 2009ರಿಂದ ಈ ತನಕ ನಡೆದಿರುವ ಬಹುತೇಕ ರಾಜಕೀಯ ಪ್ರೇರಿತ ಕೊಲೆಗಳನ್ನು ಭೇದಿಸಲಾಗಿದೆ. ಆದರೆ ಡಾ.ಕಲಬುರ್ಗಿ ಪ್ರಕರಣ ಮಾತ್ರ ಇನ್ನೂ ತನಿಖೆಯಲ್ಲಿದೆ ಎಂದು ಹೇಳಿದರು.

Follow Us:
Download App:
  • android
  • ios