ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕುತ್ತಿಲ್ಲ ಎಂಬ ರೈತರ ಕೂಗಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತಾಪಿ ವಲಯಕ್ಕೆ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ. 

ನವದೆಹಲಿ: ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕುತ್ತಿಲ್ಲ ಎಂಬ ರೈತರ ಕೂಗಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತಾಪಿ ವಲಯಕ್ಕೆ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ. ಭತ್ತ ಸೇರಿದಂತೆ ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಇನ್ನೆರಡು ವಾರಗಳಲ್ಲಿ ಕಬ್ಬು ಬೆಳೆಗೆ ನ್ಯಾಯೋಚಿತ ಮತ್ತು ಸಂಭಾವನೆ ಬೆಲೆ (ಎಫ್‌ಆರ್‌ಪಿ)ಯನ್ನು ಘೋಷಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಇಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಪಂಜಾಬ್‌ ಸೇರಿದಂತೆ ಪ್ರಮುಖ ಕಬ್ಬು ಬೆಳೆಯುವ ರಾಜ್ಯಗಳ 140 ಪ್ರತಿನಿಧಿಗಳಿಗೆ ಅವರು ಈ ಭರವಸೆ ನೀಡಿದ್ದಾರೆ. ಪ್ರಧಾನಿ ನೀಡಿರುವ ಈ ಭರವಸೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ಕೋಟ್ಯಂತರ ರೈತರಿಗೆ, ತಾವು ಬೆಳೆ ಬೆಳೆಯಲು ಮಾಡಿದ ವೆಚ್ಚಕ್ಕಿಂತ ಹೆಚ್ಚಿನ ಬೆಲೆ ಸಿಗುವ ಖಾತರಿಯನ್ನು ಒದಗಿಸಲಿದೆ.

ಭರ್ಜರಿ ಏರಿಕೆ:  ಕಳೆದ 10 ದಿನದಲ್ಲಿ ಎರಡನೇ ಬಾರಿ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಮುಂಗಾರು ಹಂಗಾಮಿನ ಬೆಳೆಗಳಿಗೆ, ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹಣವನ್ನು ಕನಿಷ್ಠ ಬೆಂಬಲ ಬೆಲೆಯಾಗಿ ಘೋಷಿಸಲಾಗುವುದು. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಇದು ರೈತರ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿದರು.

ಕಬ್ಬಿಗೆ ಬೆಂಬಲ:  ಇದೇ ವೇಳೆ ಎರಡು ವಾರಗಳೊಳಗೆ ಕಬ್ಬು ಬೆಳೆಗೆ ಎಫ್‌ಆರ್‌ಪಿಯನ್ನು ಘೋಷಿಸಲಾಗುತ್ತದೆ, ಅದು 2017-18ರ ಅವಧಿಯ ದರಕ್ಕಿಂತ ಹೆಚ್ಚು ಇರಲಿದೆ. ಮುಂದಿನ ಎರಡು ವಾರಗಳಲ್ಲಿ 2018-19ರ (ಅಕ್ಟೋಬರ್‌-ಸೆಪ್ಟೆಂಬರ್‌) ಅವಧಿಯ ಕಬ್ಬು ಬೆಳೆಯ ಎಫ್‌ಆರ್‌ಪಿ ಘೋಷಿಸಲಾಗುತ್ತದೆ. ಅಲ್ಲದೆ, ಕೆಲವೊಂದು ಪ್ರೋತ್ಸಾಹಕಗಳನ್ನೂ ಪ್ರಕಟಿಸಲಾಗುತ್ತದೆ ಎಂದು ಮೋದಿ ಭರವಸೆ ನೀಡಿದರು. ಜೊತೆಗೆ ಕಬ್ಬು ಬೆಳೆಗಾರರ ಹಿಂಬಾಕಿ ತೀರಿಸುವಲ್ಲಿ ತೆಗೆದುಕೊಂಡ ವಿವಿಧ ನಿರ್ಧಾರಗಳ ಬಗ್ಗೆ ಪ್ರಧಾನಿ ಮೋದಿ ಕಬ್ಬು ಬೆಳೆಗಾರರಿಗೆ ಮಾಹಿತಿ ನೀಡಿದರು. ಹೊಸ ನೀತಿಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ಕಳೆದ ಹತ್ತು ದಿನಗಳಲ್ಲಿ 4,000 ಕೋಟಿ ರು. ಹಿಂಬಾಕಿಯನ್ನು ರೈತರಿಗೆ ವಿತರಿಸಲಾಗಿದೆ. ಕಬ್ಬು ಬೆಳೆಗಾರರ ಹಿಂಬಾಕಿ ವಿತರಣೆ ಪೂರ್ಣಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ನಿರ್ದೇಶಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ಜೂ.1ರ ವರೆಗೆ ಕಬ್ಬು ಬೆಳೆಗಾರರಿಗೆ 22,654 ಕೋಟಿ ರು. ಹಿಂಬಾಕಿಯಿತ್ತು. ಇದೀಗ ಅದು 19,816 ಕೋಟಿ ರು.ಗೆ ಇಳಿಕೆಯಾಗಿದೆ. ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ರೈತರು ಹನಿ ನೀರಾವರಿ ಮತ್ತು ಸ್ಟ್ರಿಂಕ್ಲರ್‌ಗಳು, ಹೊಸ ಕೃಷಿ ತಂತ್ರಗಳನ್ನು ಬಳಸುವಂತೆ ಮೋದಿ ಸಲಹೆ ನೀಡಿದರು. ಅಲ್ಲದೆ, ಸೋಲಾರ್‌ ಪಂಪ್‌ಗಳು ಹಾಗೂ ಸೋಲಾರ್‌ ಪ್ಯಾನೆಲ್‌ಗಳನ್ನು ಬಳಸುವಂತೆಯೂ ತಿಳಿಸಿದರು.

ಏರಿಕೆಗೆ ಸಲಹೆ: 2017-18ರ ಅವಧಿಯಲ್ಲಿ ಎಫ್‌ಆರ್‌ಪಿ ಪ್ರತಿ ಕ್ವಿಂಟಾಲ್‌ ಕಬ್ಬುಗೆ 255 ರು. ಇತ್ತು. ಮುಂದಿನ ಅವಧಿಗೆ ಈ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 20 ರು. ಏರಿಸುವಂತೆ ಸರ್ಕಾರಕ್ಕೆ ಕೃಷಿ ಸಲಹಾ ಸಂಸ್ಥೆ ಸಿಎಸಿಪಿ ಪ್ರಸ್ತಾಪ ಸಲ್ಲಿಸಿದೆ.

ಹೂಡಿಕೆಗೆ ಸಲಹೆ: 2022ರೊಳಗೆ ರಾಸಾಯನಿಕ ಗೊಬ್ಬರಗಳ ಬಳಕೆ ಶೇ.10ರಷ್ಟುಇಳಿಕೆ ಮಾಡಲಾಗುತ್ತದೆ. ರೈತರ ಆದಾಯ ಹೆಚ್ಚಿಸುವುದಕ್ಕೆ ಸಂಬಂಧಿಸಿದ ಉದ್ಯಮಗಳಲ್ಲು ಹೂಡಿಕೆ ಮಾಡುವಂತೆ ಕಾರ್ಪೊರೇಟ್‌ ಸಂಸ್ಥೆಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ ಅವರು, ಇತ್ತೀಚೆಗೆ ರೈತರೊಂದಿಗೆ ನಡೆಸಿದ್ದ ಸಂವಾದದ ಕುರಿತು ಪ್ರಸ್ತಾಪಿಸಿದರು.

ಕಬ್ಬು ಬೆಳೆಗಾರರ ಹಿಂಬಾಕಿ 21,000 ಕೋಟಿ ರು.ಯಷ್ಟಿದ್ದ 2014-15 ಮತ್ತು 2015-16ರ ಅವಧಿಯಲ್ಲಿ ತಮ್ಮ ಸರ್ಕಾರ ಕೈಗೊಂಡಿದ್ದ ಕ್ರಮಗಳ ಬಗ್ಗೆಯೂ ಅವರು ಸ್ಮರಿಸಿದರು. ಪೆಟ್ರೋಲ್‌ಗೆ ಶೇ.10ರಷ್ಟುಎಥೆನಾಲ್‌ ಮಿಶ್ರಣದ ಯೋಜನೆ, ಕಬ್ಬು ಉದ್ಯಮದ ಸ್ಥಿರತೆಯನ್ನು ಕಾಪಾಡುವುದಕ್ಕೆ ಸಂಬಂಧಿಸಿದ ದೀರ್ಘಾವಧಿ ಪರಿಹಾರ. ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆಗಾರರ ಹಣ ನೀಡಲು ಕಳೆದ ಐದು ತಿಂಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಆಮದು ಸುಂಕ ಶೇ.100 ಏರಿಕೆ ಮಾಡಿರುವುದು, ರಫ್ತು ಸುಂಕ ರದ್ದು ಮಾಡಿರುವುದು, 8,500 ಕೋಟಿ ರು. ಪ್ಯಾಕೇಜ್‌ ಘೋಷಿಸಿರುವುದು ಇದರಲ್ಲಿ ಸೇರಿವೆ ಎಂದು ಮೋದಿ ತಿಳಿಸಿದರು.