ಕೊಚ್ಚಿ : ಕಳೆದ ವರ್ಷ ಕೇರಳದಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ಮಾರಣಾಂತಿಕ ನಿಫಾ ವೈರಸ್ ಮತ್ತೊಮ್ಮೆ ಕೇರಳಕ್ಕೆ ಕಾಲಿಟ್ಟಿದೆ. ಕೊಚ್ಚಿಯ 23 ವರ್ಷದ ವಿದ್ಯಾರ್ಥಿ  ಯೊಬ್ಬನಿಗೆ ನಿಫಾ ವೈರಸ್ ತಗುಲಿರುವುದನ್ನು ಕೇರಳ ಸರ್ಕಾರ ಮಂಗಳವಾರ ಖಚಿತಪಡಿಸಿದೆ. ವಿದ್ಯಾರ್ಥಿಯ ರಕ್ತದ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂ ಟ್ ಆಫ್ ವೈರಾಲಜಿ (ಎನ್‌ಐವಿ)ಯಲ್ಲಿ ಪರೀಕ್ಷೆಗೆ ಒಳಪಡಿಸಿದ ವೇಳೆ ನಿಫಾ ವೈರಸ್ ಇರುವುದು ಖಚಿತಪಟ್ಟಿದೆ. 

ಇದೇ ವೇಳೆ ಕೆರಳದಲ್ಲಿ ಇತರ 311 ಜನರಿಗೆ ನಿಫಾ ವೈರಸ್ ತಗುಲಿದ ಶಂಕೆ ವ್ಯಕ್ತವಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಶೈಲಜಾ ಹೇಳಿದ್ದಾರೆ.

ಈ ಮುನ್ನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಕೇರಳ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿಯೂ ವಿದ್ಯಾರ್ಥಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿ ಸಿದ ಸಂದರ್ಭದಲ್ಲೂ ನಿಫಾವೈರಸ್ ಪತ್ತೆಯಾಗಿತ್ತು. 

ವಿದ್ಯಾರ್ಥಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವಿದ್ಯಾರ್ಥಿಯಿಂದ ಸೋಂಕಿಗೆ ತುತ್ತಾದ 86 ಜನರ ಪಟ್ಟಿ ಸಿದ್ಧಪಡಿಸಲಾಗಿದ್ದು, ವೈದ್ಯಕೀಯ ನಿಗಾ ವಹಿಸಲಾಗಿದೆ. 

ಗೃಹ ಸಚಿವಾಲಯದೊಂದಿಗೆ ಸಂಪರ್ಕ: ರಾಜ್ಯದಲ್ಲಿ ನಿಫಾ ವೈರಸ್ ಪತ್ತೆಯಾಗಿರವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ತಜ್ಞರ ತಂಡ ಕೊಚ್ಚಿಗೆ ಆಗಮಿಸಿದೆ. ಸೋಂಕು ನಿವಾರಣೆಗೆ ತಜ್ಞ ವೈದ್ಯರು ಸೂಚಿಸಿದ ಮಾರ್ಗದರ್ಶಿ ಸುತ್ರಗಳನ್ನು ಪಾಲಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.