ಹೊರರಾಜ್ಯದ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ 10ನೇ ತರಗತಿ ಪಾಸಾಗಲು ಇದು ಕಡ್ಡಾಯವಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ತಿರುವನಂತಪುರ(ಏ.11): 10ನೇ ತರಗತಿಯವರೆಗೆ ಮಲಯಾಳಂ ಭಾಷೆಯನ್ನು ಒಂದು ವಿಷಯವನ್ನಾಗಿ ಕಡ್ಡಾಯಗೊಳಿಸಿ ಕೇರಳ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಈ ಆದೇಶವು ಬರುವ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ.
ಸರ್ಕಾರಿ, ಅನುದಾನಿತ, ಅನುದಾನರಹಿತ, ಸ್ವ-ಹಣಕಾಸು ಶಿಕ್ಷಣ ಸಂಸ್ಥೆಗಳು, ಸಿಬಿಎಸ್'ಇ ಮತ್ತು ಐಸಿಎಸ್'ಇ ನೋಂದಾಯಿತ ಶಾಲೆಗಳಿಗೂ ಇದು ಅನ್ವಯವಾಗಲಿದೆ. ಆದರೆ ಹೊರರಾಜ್ಯದ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ 10ನೇ ತರಗತಿ ಪಾಸಾಗಲು ಇದು ಕಡ್ಡಾಯವಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಶಾಲೆಗಳಿಗೆ ನಿರಾಕ್ಷೇಪಣಾ ಪತ್ರ ನೀಡುವುದಕ್ಕೂ ಮಲಯಾಳಂ ಭಾಷಾ ಕಲಿಕೆ ಕಡ್ಡಾಯವಾಗಲಿದೆ. ಸುಗ್ರೀವಾಜ್ಞೆಯ ಅನುಸಾರ ಯಾವುದೇ ಶಾಲೆಗೆ ಮಲಯಾಳಿ ಭಾಷಾ ಕಲಿಕೆ ಮೇಲೆ ಪ್ರತ್ಯೇಕ ಮತ್ತು ಪರೋಕ್ಷ ನಿರ್ಬಂಧ ಹೇರಲಾಗದು. ಮಲಯಾಳಂ ಮಾತನಾಡಕೂಡದು ಎಂಬ ಫಲಕವನ್ನು ಶಾಲೆಗಳಲ್ಲಿ ಹಾಕಕೂಡದು. ಆದೇಶಗಳನ್ನು ಪಾಲಿಸದೇ ಹೋದರೆ ಶಾಲಾ ಮುಖ್ಯೋಪಧ್ಯಾಯರಿಗೆ ₹5 ಸಾವಿರ ದಂಡ ಹಾಕಲಾಗುವುದು ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.
