ಬೆಂಗಳೂರು (ಡಿ. 05): ಶಬರಿಮಲೆ ಅಯ್ಯಪ್ಪಸ್ವಾಮಿ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಬಾಲಕಿಯೊಬ್ಬಳನ್ನು ಬಂಧಿಸಿದೆ ಎಂಬರ್ಥದ ಸಂದೇಶದೊಂದಿಗೆ ಅಯ್ಯಪ್ಪಮಾಲೆ ಧರಿಸಿದಂತೆ ಕಾಣುವ ಪುಟ್ಟಬಾಲಕಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಹಿಂದು ಹಿಂದುತ್ವ’ ಎಂಬ ಫೇಸ್‌ಬುಕ್‌ ಪೇಜ್‌ ಈ ಬಾಲಕಿಯ ಪೋಟೋವನ್ನು ಪೋಸ್ಟ್‌ ಮಾಡಿ, ‘ಕೇರಳ ಸರ್ಕಾರ ಈ ಬಾಲಕಿಯನ್ನು ಬಂಧಿಸಿದೆ. ಕಾರಣ ಗೊತ್ತೇ? ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಿಸುವಂತೆ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಈ ಬಾಲಕಿ ವಿರೋಧಿಸಿದ್ದಳು. ಹಾಗಾಗಿ ಕೇರಳ ಸರ್ಕಾರ ಈಕೆಯನ್ನು ಬಂಧಿಸಿದೆ’ ಎಂದು ಒಕ್ಕಣೆ ಬರೆಲಾಗಿದೆ. ಅನಂತರದಲ್ಲಿ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ವಾಸ್ತವ ಏನು ಪರಿಶೀಲಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಬಾಲಕಿ ಕೇರಳ ಜನಪ್ರಿಯ ಬಾಲ ಪ್ರತಿಭೆ.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಈ ಬಾಲಕಿಯ ಅನೇಕ ಫೋಟೋಗಳು ಲಭ್ಯವಿದ್ದು, ‘ಶೇರ್‌ಸ್ಟಿಲ್‌.ಕಾಮ್‌’ನಲ್ಲಿ ಫೆäಟೋದೊಂದಿಗೆ ಆಕೆಯ ಕುರಿತ ಕಿರು ವಿವರವೂ ಇರುವುದು ಪತ್ತೆಯಾಗಿದೆ. ಅದರಲ್ಲಿ ಆಕೆಯ ಹೆಸರು ಅಕ್ಷರಾ ಕಿಶೋರ್‌ ಎಂದಿದೆ.

ಸದ್ಯ ವೈರಲ್‌ ಆಗಿರುವ ಫೋಟೋವನ್ನು ಅಕ್ಷರ ಕಿಶೋರ್‌ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಯೂಟ್ಯೂಬ್‌ನಲ್ಲಿ ಅಯ್ಯಪ್ಪ ಸ್ವಾಮಿ ಕುರಿತ ಭಕ್ತಿ ಗೀತೆಗೆ ಸಂಬಂಧಿಸಿದ ವಿಡಿಯೋದಲ್ಲಿಯೂ ಬಾಲಕಿಯು ಇದೇ ರೀತಿಯ ವಸ್ತ್ರ ಧರಿಸಿರುವ ವಿಡಿಯೋ ಇದೆ. ಇದೇ ಫೋಟೋವನ್ನು ಬಳಸಿಕೊಂಡು ಕೇರಳ ಸರ್ಕಾರ ಬಾಲಕಿಯನು ಬಂಧಿಸಿದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ.

-ವೈರಲ್ ಚೆಕ್