ಮೋದಿ ಹೊಗಳಿದ್ದಕ್ಕೆ ತರೂರ್| ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನ| ವಿವರಣೆ ನೀಡುವಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ನೋಟಿಸ್ ಜಾರಿ|
ತಿರುವನಂತಪುರಂ[ಆ.28]: ಪ್ರಧಾನಿ ಮೋದಿಯನ್ನು ಹೊಗಳಿದ್ದಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಕೆಂಡವಾಗಿದ್ದು, ವಿವರಣೆ ನೀಡುವಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಾಡಿ ರಾಮಚಂದ್ರನ್ ತರೂರ್ ಈ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನವಾಗಿದ್ದು, ಕ್ರಮ ಕೈಗೊಳ್ಳುವಂತೆ ಹಲವು ಲಿಖಿತ ದೂರುಗಳು ಬಂದಿವೆ. ಹಾಗಾಗಿ ನಾವು ಅವರಿಂದ ವಿವರಣೆ ಬಯಸಿದ್ದೇವೆ. ತರೂರ್ ವಿದೇಶದಲ್ಲಿರುವುದರಿಂದ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ . ಅವರಿಂದ ವಿವರಣೆ ಪಡೆದುಕೊಂಡು ಎಐಸಿಸಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಮೋದಿ ಹೊಗಳಿದ ಜೈರಾಂಗೆ ಸಿಂಘ್ವಿ, ತರೂರ್ ಬೆಂಬಲ!
ಕಳೆದ ವಾರ ಕೈ ಹಿರಿಯ ನಾಯಕ ಜೈರಾಂ ರಮೇಶ್ ಮೋದಿ ಹೊಗಳಿದ್ದನ್ನು ಸಿಂಘ್ವಿ ಹಾಗೂ ತರೂರ್ ಬೆಂಬಲಿಸಿದ್ದರು. ತರೂರ್ ಈ ನಡವಳಿಕೆ ಪಕ್ಷದ ನಾಯಕರು ಕೆರಳುವಂತೆ ಮಾಡಿದ್ದು, ಮೋದಿಯನ್ನು ಹೊಗಳುವುದಿದ್ದರೆ ತರೂರ್ ಬಿಜೆಪಿಗೆ ಸೇರಲಿ ಎಂದು ಪಕ್ಷದ ಮತ್ತೊಬ್ಬ ಸಂಸದ ಬೆನ್ನಿ ಬೆಹನ್ನನ್ ಕಿಡಿ ಕಾರಿದ್ದಾರೆ. ಅಲ್ಲದೇ ಈ ವಷಯದಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ತಕ್ಷಣ ಮಧ್ಯಪ್ರವೇಶ ಮಾಡಬೇಕೆಂದು ಸಂಸದ ಟಿ.ಎನ್. ಪ್ರತಾಪನ್ ಆಗ್ರಹಿಸಿದ್ದಾರೆ.
