ಅದೆಲ್ಲಕ್ಕಿಂತ ವಿಶಿಷ್ಟವಾದ ‘ಅಡ್ಡದಾರಿ’ಯನ್ನು ಕಂಡುಕೊಳ್ಳುವ ಮೂಲಕ ಕೇರಳದ ಬಾರ್‌ವೊಂದು ಭಾರಿ ಸುದ್ದಿಯಲ್ಲಿದೆ.

ತಿರುವನಂತಪುರ(ಏ.8): ರಾಜ್ಯ- ರಾಷ್ಟ್ರೀಯ ಹೆದ್ದಾರಿಗಳ 500 ಮೀಟರ್ ಆಸುಪಾಸಿನಲ್ಲಿ ಮದ್ಯದಂಗಡಿಗಳು ಇರುವಂತಿಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪಿನಿಂದ ಪಾರಾಗಲು ಕೆಲ ರಾಜ್ಯ ಸರ್ಕಾರಗಳು ರಾಜ್ಯ ಹೆದ್ದಾರಿಗಳನ್ನೇ ಜಿಲ್ಲಾ ಹೆದ್ದಾರಿಗಳಾಗಿ ಪರಿವರ್ತನೆ ಮಾಡಿದವು.

ಐಷಾರಾಮಿ ರೆಸ್ಟೋರೆಂಟ್‌ಗಳು ಹೆದ್ದಾರಿ ಪಕ್ಕದ ದ್ವಾರವನ್ನೇ ಮುಚ್ಚಿ ಬೇರೆ ದ್ವಾರವನ್ನು ತೆರೆದವು. ಅದೆಲ್ಲಕ್ಕಿಂತ ವಿಶಿಷ್ಟವಾದ ‘ಅಡ್ಡದಾರಿ’ಯನ್ನು ಕಂಡುಕೊಳ್ಳುವ ಮೂಲಕ ಕೇರಳದ ಬಾರ್‌ವೊಂದು ಭಾರಿ ಸುದ್ದಿಯಲ್ಲಿದೆ.

ಎರ್ನಾಕುಲಂನ ಪರವೂರಿನಲ್ಲಿರುವ ಐಶ್ವರ್ಯ ರೆಸ್ಟೋಬಾರ್ ರಾಷ್ಟ್ರೀಯ ಹೆದ್ದಾರಿ-17ರ ಪಕ್ಕದಲ್ಲೇ ಇದೆ. ಸುಪ್ರೀಂಕೋರ್ಟ್ ಆದೇಶದಿಂದಾಗಿ ಆ ಬಾರ್ ಮುಚ್ಚಬೇಕಾಗಿದೆ. ಆದರೆ ಆ ಬಾರ್ ಅನ್ನು ಉಳಿಸಿಕೊಳ್ಳಲು ಮಾಲೀಕರು ಬಾರ್‌ಗೆ ಹೋಗುವ ದಾರಿಯಲ್ಲಿ 250ರಿಂದ 300 ಮೀಟರ್‌ರಷ್ಟು ಸುತ್ತಿ ಬಳಸಿ ಹೋಗುವಂತಹ ‘ಉಪ ಮಾರ್ಗ’ ಸೃಷ್ಟಿಸಿದ್ದಾರೆ. ತನ್ಮೂಲಕ ತಮ್ಮ ಬಾರ್ ಹೆದ್ದಾರಿಗೆ 500 ಮೀಟರ್ ಅಂತರದಲ್ಲಿಲ್ಲ ಎಂದು ತೋರಿಸಿದ್ದಾರೆ. ಈ ಮಾರ್ಗ ನಿರ್ಮಾಣಕ್ಕೆ ಅವರು 2 ಲಕ್ಷ ರು. ವೆಚ್ಚ ಮಾಡಿದ್ದಾರೆ.

ಇದಕ್ಕೆಕಾನೂನುಒಪ್ಪುತ್ತಾ?

ಮದ್ಯಪ್ರಿಯರು ಬಾರ್‌ಗೆ ಖುಷಿಯಿಂದಲೇ ಹೋಗಬಹುದು. ಆದರೆ ಹೊರಬರುವಾಗ ಈ ಸುತ್ತಿ ಬಳಸುವ ದಾರಿಯಲ್ಲಿ ಕಂಗಾಲಾಗಬಹುದು ಎಂಬ ಜೋಕ್‌ಗಳೂ ಕೇಳಿಬಂದಿವೆ. ಜತೆಗೆ ಬಾರ್ ಮಾಲೀಕರ ‘ಅಡ್ಡದಾರಿ’ಯನ್ನು ಅಧಿಕಾರಿಗಳು ಒಪ್ಪುತ್ತಾರಾ ಎಂಬ ಪ್ರಶ್ನೆಯೂ ಇದೆ. ಒಪ್ಪದೇ ಹೋದಲ್ಲಿ ಬಾರ್ ಮಾಲೀಕರ 2 ಲಕ್ಷ ರೂ. ವ್ಯರ್ಥವಾಗಲಿದೆ.