ನವದೆಹಲಿ: ‘ಅಯೋಧ್ಯೆಯ ರಾಮಜನ್ಮಭೂಮಿ ಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲೇಬೇಕು. ಇನ್ನು ಸಂಧಾನಕ್ಕೆ ಜಾಗವಿಲ್ಲ. ಮಂದಿರ ನಿರ್ಮಾಣಕ್ಕೆ ಒಂದೋ ಕಾನೂನು ಮಾಡಬೇಕು, ಇಲ್ಲವೇ ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದು ಎರಡು ದಿವಸಗಳ ಸಂತ ಸಮಾವೇಶದ ಸಮಾರೋಪದಲ್ಲಿ ಸಾಧು-ಸಂತರು ಮೋದಿ ಸರ್ಕಾರವನ್ನು ಆಗ್ರಹಿಸಿ ಮಹತ್ವದ ಗೊತ್ತು ವಳಿ ಅಂಗೀಕರಿಸಿ ದ್ದಾರೆ. 

ದಿಲ್ಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ  ಭಾನುವಾರ ಸಂಜೆ ಮುಕ್ತಾಯವಾದ ಈ ಸಮಾವೇಶದಲ್ಲಿ ಸುಮಾರು 3500 ಸಾಧು-ಸಂತರು ಈ ಮಹತ್ವದ ನಿರ್ಣ ಯಗಳನ್ನು ಅಂಗೀಕರಿಸಿದರು. ರಾಮಮಂದಿರ ನಿರ್ಮಾಣದ ಜೊತೆಗೆ ಗಂಗಾ ನದಿ ಸ್ವಚ್ಛತೆ ಮತ್ತು ಗೋವುಗಳ ರಕ್ಷಣೆ ಕುರಿತ ನಿರ್ಣಯಗಳನ್ನೂ ಸಭೆ ಅಂಗೀಕರಿಸಿತು. 

ಇದೇ ವೇಳೆ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಸಂತರು ನಿರ್ಧರಿಸಿದ್ದಾರೆ.  ದಿಲ್ಲಿ, ಅಯೋಧ್ಯೆ, ನಾಗಪುರ ಹಾಗೂ  ಬೆಂಗಳೂರಿನಲ್ಲಿ ಬೃಹತ್ ಸಂತ ಸಮಾವೇಶಗಳನ್ನು ಆಯೋಜಿಸಿ ರಾಮಮಂದಿರ ನಿರ್ಮಾಣ ನಿರ್ಮಾಣಕ್ಕೆ ಆಗ್ರಹಿಸಲು ಮುಂದಾಗಿದ್ದಾರೆ. ಅಯೋಧ್ಯೆ, ನಾಗಪುರ ಹಾಗೂ ಬೆಂಗಳೂರಿನಲ್ಲಿ ನವೆಂಬರ್ 25 ರಂದು ಏಕಕಾಲಕ್ಕೆ ಧರ್ಮಸಭೆಗಳು ನಡೆಯಲಿವೆ. ದಿಲ್ಲಿಯಲ್ಲಿ ಡಿಸೆಂಬರ್ 9 ರಂದು ಧರ್ಮಸಭೆ ನಡೆಸಲಾಗುವುದು  ಎಂಬ ನಿರ್ಣಯ ಕೈಗೊಳ್ಳಲಾಗಿದೆ. 

ಸಮಸ್ತ ಸಂತರ ಪರವಾಗಿ ‘ಧರ್ಮದೇಶ’ಗಳನ್ನು (ನಿರ್ಣಯಗಳು) ಹಂಸಗುರು ದೇವಾಚಾರ್ಯರು ಕರತಾಡನದ ಮಧ್ಯೆ ಪ್ರಕಟಿಸಿದರು. ಇದಕ್ಕೂ ಮುನ್ನ ಅನೇಕ ಯತಿಗಳು, ಸಂತರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಮಂದಿರ ನಿರ್ಮಾಣಕ್ಕೆ ಸರ್ಕಾರವನ್ನು ಆಗ್ರಹಿಸಿದರು.

ಶ್ರೀ ಶ್ರೀ ಪ್ರಸ್ತಾಪ: ಬೆಂಗಳೂರಿನ ಆರ್ಟ್ ಆಫ್  ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಮೂರು ಸಂಧಾನ ಸೂತ್ರಗಳನ್ನು ಸಭೆಯ ಮುಂದೆ ಇರಿಸಿದರು. ‘ಅಯೋಧ್ಯೆಯ ಬಾಬ್ರಿ ಮಸೀದಿ ಹಾಗೂ ರಾಮಮಂದಿರಕ್ಕೆ ಸಂಬಂಧಿಸಿದ ವಿವಿಧ ಪಕ್ಷಗಾರರ ಮಧ್ಯೆ ಮೊದಲು ಸಂಧಾನ ಮಾತುಕತೆಗಳನ್ನು ಏರ್ಪಡಿಸಬೇಕು. ಇದು ಮೊದಲ ಸೂತ್ರ. ಸುಪ್ರೀಂ ಕೋರ್ಟ್ ಕದ ಬಡಿಯುವುದು ಹಾಗೂ ಸರ್ಕಾರಕ್ಕೆ ಅಧ್ಯಾದೇಶ ಪ್ರಕಟಿಸಲು ಆಗ್ರಹಿಸುವುದು ಎರಡು ಹಾಗೂ ಮೂರನೇ ಸೂತ್ರಗಳಾಗಬೇಕು. ಮೊದಲ ಆದ್ಯತೆ ಏನಿದ್ದರೂ ಮಾತುಕತೆಗೆ’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಗೆ ಬೆಂಬಲ: ಈ ನಡುವೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನೇ ಬೆಂಬಲಿಸಲೂ ಸಭೆ ನಿರ್ಧರಿಸಿತು. ರಾಮಮಂದಿರ ವಿಷಯದಲ್ಲಿ ಸರ್ಕಾರ ಇನ್ನೂ ನಿರ್ಣಯಕ್ಕೆ ಬರದೇ ಇರುವುದು ನಮಗೆ ತೀರಾ ಬೇಸರ ತರಿಸಿದೆ. ಇದರ ಹೊರತಾಗಿಯೂ ದೇಶ, ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಸರ್ಕಾರದ ಕೆಲಸಗಳು ನಮಗೆ ತೃಪ್ತಿ ತಂದಿವೆ. ಹೀಗಾಗಿ ಮುಂದಿನ ಬಾರಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂಬುದು ನಮ್ಮ ಆಶಯವಾಗಿರಲಿದೆ ಎಂದು ಸಭೆ ಅಂಗೀಕರಿಸಿದ ವಿಷಯ ಪಟ್ಟಿ ಹೇಳಿದೆ. 

ರಾಹುಲ್ ಗುದ್ದಲಿ ಪೂಜೆ ಮಾಡಲಿ- ಉಮಾ: ಈ ನಡುವೆ, ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಕೇಂದ್ರ ಸಚಿವೆ ಉಮಾಭಾರತಿ, ‘ರಾಮಜನ್ಮಭೂಮಿ ಯ ಪ್ರದೇಶದಲ್ಲೇ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಿದರೆ ಅದು ಹಿಂದೂಗಳ ಅಸಹಿಷ್ಣುತೆಗೆ ನಾಂದಿ ಹಾಡೀತು’ ಎಂದು ಎಚ್ಚರಿಸಿದರು. 

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನ್ನ ಜತೆಗೇ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಬೇಕು. ಹಾಗಿದ್ದಾಗ ಮಾತ್ರ ಕಾಂಗ್ರೆಸ್ ಪಕ್ಷದ ಹಿಂದಿನ ಪಾಪಗಳು ತೊಳೆದು ಹೋಗಲಿವೆ’ ಎಂದೂ ಉಮಾ ವ್ಯಂಗ್ಯವಾಡಿದರು. ಈ ನಡುವೆ, ಉತ್ತರಪ್ರದೇಶ ಹಾಗೂ ಬಿಹಾರದ ವಿವಿಧ ಸ್ಥಳಗಳಲ್ಲಿ ಮಾತನಾಡಿದ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ‘ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣ ಆಗುವುದನ್ನು ಯಾವ ಶಕ್ತಿಯೂ ತಡೆಯಲಾಗದು’ ಎಂದು ಎಚ್ಚರಿಸಿದರು. ಆದರೆ ಈ ಆಗ್ರಹಗಳು ರಾಜಕೀಯ ಪ್ರೇರಿತವಾಗಿವೆ ಎಂದು ಮುಸ್ಲಿಮರ ಪರಮೋಚ್ಚ ಧಾರ್ಮಿಕ ಮಂಡಳಿಯಾದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಆರೋಪಿಸಿದೆ.

ಶೀಘ್ರ ಕೆಲಸ ಶುರು  :  ‘ಶ್ರೀ ರಾಮನಿಗಾಗಿ ದೀಪ ಹಚ್ಚಬೇಕು. ಅಲ್ಲಿ (ಅಯೋ ಧ್ಯೆ) ಕೆಲಸ ಶೀಘ್ರ ಆರಂಭ ವಾಗಲಿದೆ. ದೀಪಾವಳಿ  ನಂತರ ಇದನ್ನು ಕೈಗೆತ್ತಿಕೊಳ್ಳಬೇಕು’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೂಢಾರ್ಥದ ಹೇಳಿಕೆ ಯೊಂದನ್ನು ನೀಡಿದ್ದಾರೆ. ಬಿಕಾನೇರ್ ನಲ್ಲಿ ಭಾನುವಾರ ಮಾತ ನಾಡಿದ ಅವರು, ದೀಪಾವಳಿಯ ನಂತರ ಕೆಲಸ ಆರಂಭವಾಗುವ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.