ನಾಯ್ಡು ಮಹಾಮೈತ್ರಿಕೂಟಕ್ಕೆ ಕೆಸಿಆರ್‌ ಸಂಯುಕ್ತ ರಂಗ ಸಡ್ಡು| ಟಿಎಂಸಿ, ಎಸ್‌ಪಿ, ಬಿಎಸ್‌ಪಿ ಸಂಪರ್ಕದಲ್ಲಿರುವ ಪಕ್ಷ

ಹೈದರಾಬಾದ್‌[ಡಿ.21]: ಒಂದೆಡೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ 2019ರ ಲೋಕಸಭಾ ಚುನಾವಣೆಗೆ ಮಹಾಮೈತ್ರಿಕೂಟ ರಚನೆಗೆ ಯತ್ನಿಸುತ್ತಿರುವಾಗಲೇ, ಅವರ ಕಡುವೈರಿ ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌ ಅವರು ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸಂಯುಕ್ತ ರಂಗ ರಚಿಸುವಲ್ಲಿ ನಿರತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಾಮೈತ್ರಿಕೂಟದ ಸಭೆಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಹಾಗೂ ಕಾಂಗ್ರೆಸ್‌ ಜೊತೆ ಮುನಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳ ಮಾತುಕತೆ ನಡೆಸಿದೆ ಎನ್ನಲಾಗಿದೆ.

‘ಆಯಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕು ಎಂಬುದು ನಮ್ಮ ಇರಾದೆ. ಇದರಿಂದ ನಮ್ಮ ಬಲ ಹೆಚ್ಚಲಿದ್ದು, ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್‌ ಜತೆಗಾಗಲಿ ಚೌಕಾಶಿ ಮಾಡಲು ಅನುಕೂಲವಾಗುತ್ತದೆ’ ಎಂದು ಲೋಕಸಭೆಯ್ಲಿನ ಟಿಆರ್‌ಎಸ್‌ ಉಪನಾಯಕ ಬಿ. ವಿನೋದ್‌ಕುಮಾರ್‌ ಹೇಳಿದರು.

ಹೀಗೆ ಮಾಡದೇ ಹೋದರೆ ಕಾಂಗ್ರೆಸ್‌ ಅಥವಾ ಬಿಜೆಪಿಗಳು ಪ್ರತ್ಯೇಕವಾಗಿ ಪ್ರಾದೇಶಿಕ ಪಕ್ಷಗಳ ಜತೆ ವ್ಯವಹಾರ ಕುದುರಿಸಿ ತಮ್ಮ ಅಣತಿಯಂತೆ ನಡೆಸಿಕೊಳ್ಳುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈಗಾಗಲೇ ಈ ತಂತ್ರಗಾರಿಕೆ ಸಂಬಂಧ ಎಸ್‌ಪಿ, ಬಿಎಸ್‌ಪಿ ಹಾಗೂ ಟಿಎಂಸಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.