ಸಭೆಯಲ್ಲಿ ವೇಣುಗೋಪಾಲ್ ಮಾತನಾಡುವಾಗ ಕರೆಂಟ್ ಮತ್ತು ಮೈಕ್ ಕೈಕೊಟ್ಟ ಘಟನೆ ನಡೆಯಿತು. ನಾಲ್ಕೈದು ಬಾರಿ ಅವರಿಗೆ ಮೈಕ್ ಕೈಕೊಟ್ಟಿತು. ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ, ಅದರ ಕಚೇರಿಯಲ್ಲಿ ಹಿಂದೆಂದೂ ಮೈಕ್ ವಿಫಲವಾದ ಉದಾಹರಣೆ ಇಲ್ಲವಂತೆ. ಕಾಕತಾಳೀಯವೆಂಬಂತೆ ದೇಶದಲ್ಲಿ ಕಾಂಗ್ರೆಸ್'ಗೆ ಸಂಕಟ ಎದುರಾದಾಗೆಲ್ಲಾ ಕರ್ನಾಟಕವು ಕೈಹಿಡಿದಿದೆ ಎಂದು ವೇಣುಗೋಪಾಲ್ ಹೇಳುವ ವೇಳೆಯೇ ಮೈಕ್ ಕೈಕೊಟ್ಟಿತು.
ಬೆಂಗಳೂರು(ಮೇ 08): ಕೆಪಿಸಿಸಿ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ಹಾಗೂ ಮುಂದಿನ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಕರ್ನಾಟಕದ ಕಾಂಗ್ರೆಸ್ ಉಸ್ತುವರಿ ವೇಣುಗೋಪಾಲ್ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ವೇಣುಗೋಪಾಲ್ ಅವರು ರಾಜ್ಯ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಿದರು. ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ನಂತರದ ಮೊದಲ ಸಭೆಯಾದ ಇದರಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು ಪಾಲ್ಗೊಂಡರು. ಕೇರಳದ ಕಾಂಗ್ರೆಸ್ಸಿಗ ವೇಣುಗೋಪಾಲ್ ಪ್ರತಿಯೊಬ್ಬರಿಗೂ 5 ಪ್ರಶ್ನೆಗಳನ್ನು ಕೇಳಿದರು.
1) ಪಕ್ಷದಲ್ಲಿ ಗುಂಪುಗಾರಿಕೆ ಇದೆಯೇ ?
2) ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕು? ಯಾಕೆ ಆಗಬೇಕು? ಎಂಥವರು ಬೇಕು?
3) ಸಿದ್ದರಾಮಯ್ಯ ಸರ್ಕಾರದ ಪಾಸಿಟಿವ್ ಅಂಶಗಳು ಹಾಗೂ ನೆಗೆಟಿವ್ ಅಂಶಗಳೇನು?
4) ಸರ್ಕಾರದ ಯೋಜನೆಗಳು ಜನರಿಗೆ ತಲುಪಿದೆಯಾ? ಇಲ್ಲದಿದ್ರೆ ಈಗ ತಲುಪಿಸುವುದು ಹೇಗೆ?
5) ಬಿಜೆಪಿ ಮಿಷನ್ 150 ಟಾರ್ಗೆಟ್ ಅನ್ನು ಡೈವರ್ಟ್ ಮಾಡೋದು ಹೇಗೆ?
ರಮೇಶ್ ಕುಮಾರ್ ನೇರ ಮಾತು:
ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸಚಿವ ರಮೇಶ್ ಕುಮಾರ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು. "ಪಕ್ಷವು ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಬದಲಾವಣೆ ಮಾಡಿಕೊಳ್ಳಲೇ ಬೇಕು. ನನ್ನ ಅಭಿಪ್ರಾಯದ ಪ್ರಕಾರ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿಲ್ಲ" ಎಂದು ಅಭಿಪ್ರಾಯಪಡುವ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ರಮೇಶ್ ಕುಮಾರ್ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು.
ಕೈಕೊಟ್ಟ ಕರೆಂಟ್:
ಸಭೆಯಲ್ಲಿ ವೇಣುಗೋಪಾಲ್ ಮಾತನಾಡುವಾಗ ಕರೆಂಟ್ ಮತ್ತು ಮೈಕ್ ಕೈಕೊಟ್ಟ ಘಟನೆ ನಡೆಯಿತು. ನಾಲ್ಕೈದು ಬಾರಿ ಅವರಿಗೆ ಮೈಕ್ ಕೈಕೊಟ್ಟಿತು. ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ, ಅದರ ಕಚೇರಿಯಲ್ಲಿ ಹಿಂದೆಂದೂ ಮೈಕ್ ವಿಫಲವಾದ ಉದಾಹರಣೆ ಇಲ್ಲವಂತೆ. ಕಾಕತಾಳೀಯವೆಂಬಂತೆ ದೇಶದಲ್ಲಿ ಕಾಂಗ್ರೆಸ್'ಗೆ ಸಂಕಟ ಎದುರಾದಾಗೆಲ್ಲಾ ಕರ್ನಾಟಕವು ಕೈಹಿಡಿದಿದೆ ಎಂದು ವೇಣುಗೋಪಾಲ್ ಹೇಳುವ ವೇಳೆಯೇ ಮೈಕ್ ಕೈಕೊಟ್ಟಿತು. ಆದರೂ ಕೂಡ ವೇಣುಗೋಪಾಲ್ ಒಂದಿಷ್ಟೂ ಬೇಸರಿಸದೆಯೇ ತಮ್ಮ ಮಾತುಗಳನ್ನು ಮುಂದುವರಿಸಿದ್ದು ವಿಶೇಷ.
ವೇಣುಗೋಪಾಲ್ ಟೀಮ್'ನಲ್ಲಿ ಯಾರಾರು?
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್'ನ ಆದೇಶದ ಮೇಲೆ ವೇಣುಗೋಪಾಲ್ ನೇತೃತ್ವದ ತಂಡವು ರಾಜ್ಯಕ್ಕೆ ಆಗಮಿಸಿದೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ಇರುವ ಈ ತಂಡದಲ್ಲಿ ವೇಣುಗೋಪಾಲ್ ಜೊತೆ ನಾಲ್ವರು ಎಐಸಿಸಿ ಕಾರ್ಯದರ್ಶಿಗಳಿದ್ದಾರೆ.
1) ಮಾಣಿಕಂ ಠಾಗೋರ್
2) ಪಿ.ಸಿ.ವಿಷ್ಣುನಾಥ್
3) ಮಧು ಯಕ್ಷಿಗೌಡ್
4) ಶೇಕ್ ಶೈಲಜನಾಥ್
ಇಂದು ವೇಣುಗೋಪಾಲ್ ಮತ್ತವರ ತಂಡವು ಡಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಸಭೆ ನಡೆಸಿತು. ಬಳಿಕ ಸಂಸದರು ಹಾಗೂ ಹಿರಿಯ ಮುಖಂಡರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿತು. ನಾಳೆ, ಅಂದರೆ ಮಂಗಳವಾರ ಕಾಂಗ್ರೆಸ್ ಶಾಸಕರು, ಎಂಎಲ್'ಸಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ, ಸಚಿವರ ಸಭೆ ನಡೆಸಲಿದ್ದಾರೆ. ಬುಧವಾರದಂದು ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಸಂಜೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸಭೆ ನಡೆಸಲಿದ್ದಾರೆ.
