ದಕ್ಷಿಣ ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆ ದಟ್ಟವಾಗಿದೆ. ಪೊಲೀಸ್ ಕೆಲಸ ಬಿಟ್ಟು ಉಗ್ರ ಸಂಘಟನೆ ಸೇರಿದವರೆಲ್ಲಾ ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯನ್ ಜಿಲ್ಲೆಯವರೇ ಆಗಿದ್ದಾರೆ. 2010ರಿಂದ 2012ರ ಅವಧಿಯಲ್ಲಿ ಇವರನ್ನೆಲ್ಲಾ ಹೆಚ್ಚು ಹಿನ್ನೆಲೆ ಪರಿಶೀಲನೆ ಇಲ್ಲದೆಯೇ ನೇಮಕ ಮಾಡಲಾಗಿತ್ತು. ಇವರಲ್ಲಿ ಉಗ್ರರ ಬಗ್ಗೆ ಸಹಾನುಭೂತಿ ಹೆಚ್ಚಾಗಿಯೇ ಇದೆ.

ನವದೆಹಲಿ(ಅ. 28): ಜಮ್ಮು-ಕಾಶ್ಮೀರದ ಪೊಲೀಸ್ ಪೇದೆಯೊಬ್ಬ ಭಯೋತ್ಪಾದಕ ಸಂಘಟನೆಯನ್ನು ಸೇರಿರುವ ಸಂಗತಿ ಬೆಳಕಿಗೆ ಬಂದಿದೆ. ಪೇದೆಯಾಗಿ ಕೆಲಸ ಮಾಡುತ್ತಿದ್ದ ಇಷ್ಫಾಕ್ ಅಹ್ಮದ್ ದರ್ ಎಂಬಾತ ಲಷ್ಕರೆ ತೊಯಿಬಾ ಉಗ್ರಸಂಘಟನೆಯ ಸಮವಸ್ತ್ರ ತೊಟ್ಟು ಎಕೆ-47 ರೈಫಲ್ ಹಿಡಿದು ಪೋಸು ಕೊಟ್ಟಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್'ಲೋಡ್ ಮಾಡಿ, ತಾನು ಲಷ್ಕರೆ ಸಂಘಟನೆ ಸೇರಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾನೆ. ಈತನ ಫೋಟೋ ಸೋಷಿಯಲ್ ಮೀಡಿಯಾ ಮತ್ತು ವಾಟ್ಸಾಪ್'ನಲ್ಲಿ ವೈರಲ್ ಆಗಿ ಹಬ್ಬುತ್ತಿದೆ. ಈ ಬಗ್ಗೆ ಏನೂ ಖಚಿತಗೊಳಿಸದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶೋಪಿಯನ್ ಜಿಲ್ಲೆಯ ಇಷ್ಫಾಕ್ ದರ್'ನು ಕತುವಾ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಇಷ್ಫಾಕ್ ಅ.23ರವರೆಗೆ ರಜೆ ಹಾಕಿ ಮನೆಗೆ ಹೋಗಿರುತ್ತಾನೆ. ಆದರೆ, ಡ್ಯೂಟಿಗೆ ಮರಳಿರುವುದಿಲ್ಲ. ಆನಂತರವಷ್ಟೇ ಇಷ್ಫಾಕ್'ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತದೆ.

ಪಾಕ್ ಮೂಲದ ಲಷ್ಕರೆ ಸಂಘಟನೆಯನ್ನು ಇಷ್ಫಾಕ್ ಸೇರಿಕೊಂಡಿರಬಹುದೆಂಬ ವಾದಕ್ಕೆ ಪುಷ್ಟಿ ಕೊಡುವ ಸಂಗತಿಗಳು ಇವೆ. ದಕ್ಷಿಣ ಕಾಶ್ಮೀರದವನಾದ ಇಷ್ಫಾಕ್ ಮೊದಲಿಂದಲೂ ಉಗ್ರಗಾಮಿಗಳೆಂದರೆ ಸಾಫ್ಟ್ ಕಾರ್ನರ್ ಇಟ್ಟುಕೊಂಡಿದ್ದಾತ. ಕಾರ್ಗಿಲ್'ನಲ್ಲಿ ಪೇದೆಯಾಗಿದ್ದ ಈತನನ್ನು ಇದೇ ಕಾರಣಕ್ಕೆ ಜುಲೈ ತಿಂಗಳಲ್ಲಿ ಕತುವಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇಲ್ಲಿಯೂ ಈತನ ಬಗ್ಗೆ ಒಂದು ಕಣ್ಗಾವಲು ಇದ್ದೇ ಇತ್ತು. ಸರಿಯಾದ ಸಾಕ್ಷ್ಯಾಧಾರವಿಲ್ಲದೇ ಯಾರೊಬ್ಬರ ಮೇಲೂ ಕ್ರಮ ಕೈಗೊಳ್ಳಲಾಗದ್ದರಿಂದ ಇಷ್ಫಾಕ್'ನನ್ನು ಬಂಧಿಸಲಾಗಿರಲಿಲ್ಲ. ಈ ವೇಳೆಯೇ ಸಮಯ ನೋಡಿ ಇಷ್ಫಾಕ್ ಸೀದಾ ಉಗ್ರ ಸಂಘಟನೆಗೆ ಜಂಪ್ ಮಾಡಿರುವ ಸಾಧ್ಯತೆ ಇದೆ. ಕುತೂಹಲದ ವಿಚಾರವೆಂದರೆ, ದರ್'ನ ಇಡೀ ಕುಟುಂಬದ ಸದಸ್ಯರು ಪೊಲೀಸ್ ಇಲಾಖೆಯಲ್ಲಿದ್ದಾರೆ.

ಉಗ್ರರಾಗುತ್ತಿರುವ ಪೊಲೀಸರು:
ಕಾಶ್ಮೀರದಲ್ಲಿ ಪೊಲೀಸರು ಉಗ್ರ ಸಂಘಟನೆ ಸೇರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 2 ವರ್ಷದಲ್ಲಿ ಆರೇಳು ಪೊಲೀಸರು ಉಗ್ರಗಾಮಿಗಳಾಗಿದ್ದಾರೆ.

* 2015ರಲ್ಲಿ ನಸೀರ್ ಅಹ್ಮದ್ ಪಂಡಿತ್ ಮತ್ತು ಸಯದ್ ರಾಕಿಬ್ ಬಷೀರ್ ಇಬ್ಬರು ಪೊಲೀಸ್ ಪೇದೆಗಳು ಹಿಜ್ಬುಲ್ ಮುಜಾಹಿದಿನ್ ಸೇರುತ್ತಾರೆ.
* 2016ರಲ್ಲಿ ಬಿಜಬೇಹಾರಾದಲ್ಲಿ ಶಕೂರ್ ಅಹಮದ್ ಪಾರ್ರೆ 4 ರೈಫಲ್'ಗಳೊಂದಿಗೆ ಪರಾರಿಯಾಗಿ ಉಗ್ರರ ಗುಂಪು ಸೇರಿಕೊಳ್ಳುತ್ತಾನೆ. ಆದರೆ, ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟುತ್ತಾರೆ.
* 2017ರ ಮೇ ತಿಂಗಳಲ್ಲಿ ಪೇದೆ ಸಯದ್ ನವೀದ್ ಮುಷ್ತಾಕ್ ತನ್ನ ಠಾಣೆಯಿಂದ 4 ಸರ್ವಿಸ್ ರೈಫಲ್'ಗಳನ್ನೊಂದಿಗೆ ಪರಾರಿಯಾಗಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಸೇರಿಕೊಳ್ಳುತ್ತಾನೆ
* ಜುಲೈ ತಿಂಗಳಲ್ಲಿ ಬಾರಾಮುಲ್ಲಾದ ಸೇನಾ ಎಂಜಿನಿಯರಿಂಗ್ ರೆಜಿಮೆಂಟ್'ನಲ್ಲಿದ್ದ ಜಹೂರ್ ಅಹ್ಮದ್ ಥೋಕರ್ ಎಂಬಾತ ಎಕೆ-47 ರೈಫಲ್ ಮತ್ತು ಮೂರು ಮ್ಯಾಗಜಿನ್'ಗಳೊಂದಿಗೆ ಎಸ್ಕೇಪ್ ಆಗಿ ಉಗ್ರರ ಜೊತೆ ಸೇರಿಕೊಳ್ಳುತ್ತಾನೆ.

ಜಮ್ಮು-ಕಾಶ್ಮೀರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರು ದೇಶವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿರುವುದೇಕೆ? ಹಲವು ಸಂಕೀರ್ಣ ವಿಚಾರಗಳಿರುವ ಕಣಿವೆ ರಾಜ್ಯದಲ್ಲಿ ಇಂಥ ಬೆಳವಣಿಗೆಗೆ ನಾನಾ ಕಾರಣಗಳಿವೆ.

1) ಪೊಲೀಸರ ನರಮೇಧ:
ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳು ತೀವ್ರಗೊಂಡಿವೆ. ಈ ಕಾರ್ಯಾಚರಣೆಯಲ್ಲಿ ಕಾಶ್ಮೀರೀ ಪೊಲೀಸರ ಪಾತ್ರ ಬಹಳ ಮಹತ್ವದ್ದು. ಕಳೆದ 2 ದಶಕದಲ್ಲಿ ಕಣಿವೆ ರಾಜ್ಯದಲ್ಲಿ 1500ಕ್ಕೂ ಹೆಚ್ಚು ಪೊಲೀಸರು ಹತರಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಡಿಎಸ್'ಪಿ ಮೊಹಮ್ಮದ್ ಆಯೂಬ್ ಪಂಡಿತ್ ಅವರನ್ನು ಮಸೀದಿಯ ಆವರಣದ ಪಕ್ಕದಲ್ಲೇ ಜನರು ಹಲ್ಲೆ ಮಾಡಿ ಹತ್ಯೆಗೈದಿದ್ದರು. ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರನ್ನು ಹೆದರಿಸಲು ಉಗ್ರರು ಇಂಥ ಹತ್ಯೆಗಳನ್ನು ಮಾಡುತ್ತಿರುವುದು ಗೊತ್ತಿರುವ ಸಂಗತಿ. ಒಂದು ಕಡೆ ಉಗ್ರರಿಂದ ಟಾರ್ಗೆಟ್ ಆಗುವ ಭೀತಿ; ಮತ್ತೊಂದು ಕಡೆ ಹಿರಿಯ ಅಧಿಕಾರಿಗಳಿಂದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂಬ ಒತ್ತಡ. ಈ ತೊಳಲಾಟದಲ್ಲಿ ಪೊಲೀಸರು ಉಗ್ರ ಸಂಘಟನೆ ಕಡೆ ವಾಲುವ ಸಾಧ್ಯತೆ ಇದೆ.

2) ಉಗ್ರರ ಬಗ್ಗೆ ಒಲವು:
ದಕ್ಷಿಣ ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆ ದಟ್ಟವಾಗಿದೆ. ಪೊಲೀಸ್ ಕೆಲಸ ಬಿಟ್ಟು ಉಗ್ರ ಸಂಘಟನೆ ಸೇರಿದವರೆಲ್ಲಾ ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯನ್ ಜಿಲ್ಲೆಯವರೇ ಆಗಿದ್ದಾರೆ. 2010ರಿಂದ 2012ರ ಅವಧಿಯಲ್ಲಿ ಇವರನ್ನೆಲ್ಲಾ ಹೆಚ್ಚು ಹಿನ್ನೆಲೆ ಪರಿಶೀಲನೆ ಇಲ್ಲದೆಯೇ ನೇಮಕ ಮಾಡಲಾಗಿತ್ತು. ಇವರಲ್ಲಿ ಉಗ್ರರ ಬಗ್ಗೆ ಸಹಾನುಭೂತಿ ಹೆಚ್ಚಾಗಿಯೇ ಇದೆ.

ಇವರನ್ನು ಹೊರತುಪಡಿಸಿದರೆ ಕಾಶ್ಮೀರದ ಪೊಲೀಸ್ ಪಡೆಯು ವೃತ್ತಿಪರತೆಗೆ ಖ್ಯಾತವಾಗಿದೆ. ಎಂತಹ ಆಜ್ಞೆಯನ್ನಾದರೂ ಇಲ್ಲಿಯ ಪೊಲೀಸರು ಶಿಸ್ತುಬದ್ಧವಾಗಿ ಪಾಲಿಸುತ್ತಾರೆ.