ಕಾರವಾರ[ಮಾ.18]: ರಸ್ತೆ ಪಕ್ಕದಲ್ಲಿ ಕುಳಿತು ಪಠ್ಯಪುಸ್ತಕ ಓದುತ್ತಲೇ ಹೂವು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಆಲಂಗಿಸಿದ ಶಾಸಕಿ ರೂಪಾಲಿ ನಾಯ್ಕ, ಹೂವನ್ನೆಲ್ಲ ಖರೀದಿಸಿದ ಅಪರೂಪದ ಪ್ರಸಂಗ ನಡೆಯಿತು.

ಕಾರವಾರ ಶಾಸಕಿ ರೂಪಾಲಿ ನಾಯ್ಕ ಭಾನುವಾರ ಕಾರವಾರದಿಂದ ಜೋಯಿಡಾದ ರಾಮನಗರಕ್ಕೆ ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದರು. ಜೋಯಿಡಾ ಬಳಿ ಶಾಲಾ ಬಾಲಕಿಯೊಬ್ಬಳು ರಸ್ತೆ ಪಕ್ಕದಲ್ಲೆ ಕುಳಿತು ಹೂವುಗಳ ಮಾಲೆ ಮಾರಾಟಕ್ಕೆ ಇಟ್ಟುಕೊಂಡು ಪಠ್ಯಪುಸ್ತಕ ತೆರೆದು ಪರೀಕ್ಷೆಗಾಗಿ ಓದುತ್ತಿದ್ದಳು. ಶಾಸಕಿ ಇದನ್ನು ಗಮನಿಸುವಷ್ಟರಲ್ಲಿ ಕಾರು ತುಸು ಮುಂದಕ್ಕೆ ಹೋಗಿತ್ತು.

ತಕ್ಷಣ ಕಾರನ್ನು ಹಿಂದಕ್ಕೆ ಕೊಂಡೊಯ್ಯುವಂತೆ ಚಾಲಕಿಗೆ ಸೂಚಿಸಿದ ಶಾಸಕಿ, ಕಾರಿನಿಂದ ಇಳಿದು ಬಾಲಕಿಯನ್ನು ತಬ್ಬಿಕೊಂಡು ಕ್ಷೇಮ ಸಮಾಚಾರವನ್ನು ವಿಚಾರಿಸಿದರು. ವಿದ್ಯಾರ್ಥಿನಿ ಮಾರಾಟಕ್ಕೆ ಇಟ್ಟುಕೊಂಡ ಎಲ್ಲ ಹೂವನ್ನೂ ಖರೀದಿಸಿದರು. ಮನೆಗೆ ಹೋಗಿ ಚೆನ್ನಾಗಿ ಓದು ಎಂದು ಬೆನ್ನು ತಟ್ಟಿಕಳುಹಿಸಿದರು.