ಜಮೀರ್ ಅಹಮದ್ ಖಾನ್ ಅವರಿಗೆ ಏನನ್ನಿಸಿತೋ ಗೊತ್ತಿಲ್ಲ. ಮೊದಲು ಸಿಬಿಐ ತನಿಖೆಗೆ ಒಕೆ ಅಂದ್ರು,,, ಕೆಲವೇ ಕ್ಷಣಗಳಲ್ಲಿ ಆಗಲ್ಲ ಅಂದ್ರು.. ಒಟ್ಟಿನಲ್ಲಿ ವಿಚಾರಕ್ಕೆ ತಾರ್ಕಿಕ ಅಂತ್ಯ ಸಿಗಲೆ ಇಲ್ಲ. ಜಮೀರ್ ಯು-ಟರ್ನ್ ಮಾತ್ರ ಮತ್ತೊಮ್ಮೆ ಜಗಜ್ಜಾಹೀರಾಯಿತು. ಹಾಗಾದರೆ ಆದದ್ದು ಏನು? 

ಬೆಂಗಳೂರು[ಜು.12] ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಗರಣವನ್ನು ಸಿಬಿಐ ತನಿಖೆಗೆ ನೀಡಲು ಸರಕಾರ ಸಿದ್ಧವಿದ್ದು ಸರಕಾರಕ್ಕೆ ಶಿಫಾರಸು ಮಾಡಲು ಕೋರುತ್ತೇನೆ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ ಕೆಲವೇ ಕ್ಷಣದಲ್ಲಿ ಮಾತು ಬದಲಾಯಿಸಿದರು.

ಈ ಬಗ್ಗೆ ಪ್ರಶ್ನೆ ಕೇಳಿದ ಬಿಜೆಪಿಯ ಅರುಣ್ ಶಹಾಪುರ, ಅನ್ವರ್ ಮಾನಪ್ಪಾಡಿ ವರದಿಯನ್ನು ಸದನಕ್ಕೆ ಸಲ್ಲಿಸಬೇಕು. ಕೋಟ್ಯಂತರ ರೂ ಬೆಲೆ ಬಾಳುವ ಆಸ್ತಿ ಅಕ್ರಮವಾಗಿ ಬೇರೆಯವರ ಪಾಲಾಗಿದೆ ಎಂದು ಒತ್ತಾಯಿಸಿದ್ದರು.

ಈ ಬಗ್ಗೆ ತನಿಖೆ ನಡೆಯಬೇಕು ಎಂದ ಬಿಜೆಪಿ ಸದಸ್ಯರು ಒತ್ತಾಯಿಸಿದರು. ಆದರೆ ಸಿಬಿಐ ತನಿಖೆಗೆ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಆಕ್ಷೇಪ ವ್ಯಕ್ತಪಡಿಸಿ ಈ ಪ್ರಕರಣ ಈಗಾಗಲೇ ಕೋರ್ಟ್ ನಲ್ಲಿದೆ. ಮತ್ತೊಮ್ಮೆ ಪ್ರಕರಣದ ತನಿಖೆ ಸಿಬಿಐಗೆ ನೀಡಲು ಆಗುವುದಿಲ್ಲ. ಸಚಿವರು ನೀಡಿದ ಹೇಳಿಕೆ ವಾಪಸ್ ಪಡೆಯಬೇಕು ಎಂದ ಕಾಂಗ್ರೆಸ್ ನವರೆ ಆದ ಜಬ್ಬಾರ್ ವಾದಿಸಿದರು.

ನಾನು ಸಿಬಿಐ ತನಿಖೆಗೆ ನೀಡುತ್ತೇವೆ ಎಂದು ಹೇಳಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇತ್ತು, ಕೇಂದ್ರದಲ್ಲೂ ನಿಮ್ಮದೇ ಬಿಜೆಪಿಯೇ ಇತ್ತು. ಅನ್ವರ್ ಮಾನಪ್ಪಾಡಿ ವರದಿಯೂ ಬಂದಿತ್ತು ಆಗ ಒಂದೂವರೆ ವರ್ಷ ಯಾಕೆ ಸುಮ್ಮನಿದ್ದೀರಿ? ಎಂದು ಬಿಜೆಪಿಗೆ ಮರು ಪ್ರಶ್ನೆ ಮಾಡಿದರು.ಈ ಎಲ್ಲ ವಾದ ವಿವಾದ ಆಲಿಸಿದ ಸಭಾಪತಿ ಕಡತ ನೋಡಿ ಉತ್ತರಿಸುತ್ತೇನೆ ಎಂದು ಹೇಳಿ ಬೇರೆ ವಿಚಾರಕ್ಕೆ ಸದನ ಕೊಂಡೊಯ್ದರು.