ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್‌ ಅವರಿಗೆ ಸೈಬರ್‌ ಕಳ್ಳರು .2 ಲಕ್ಷ ವಂಚಿಸಿರುವ ಕುತೂಹಲಕಾರಿ ಘಟನೆ ನಡೆದಿದೆ.

ಬೆಂಗಳೂರು :  ಬ್ಯಾಂಕ್‌ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿ ಸೋಗಿನಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್‌ ಅವರಿಗೆ ಸೈಬರ್‌ ಕಳ್ಳರು 2 ಲಕ್ಷ ರು. ವಂಚಿಸಿರುವ ಕುತೂಹಲಕಾರಿ ಘಟನೆ ನಡೆದಿದೆ. ಈ ಸಂಬಂಧ ಸಿಐಡಿ ಸೈಬರ್‌ ಕ್ರೈಂ ಠಾಣೆಗೆ ಡಿಜಿಪಿ ದೂರು ಸಲ್ಲಿಸಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

‘ನಾನು ಸೋಮವಾರ ಮಧ್ಯಾಹ್ನ 2ಕ್ಕೆ ಕಚೇರಿಯಲ್ಲಿದ್ದಾಗ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ತನ್ನನ್ನು ಬ್ಯಾಂಕ್‌ ಗ್ರಾಹಕರ ಸೇವಾ ಕೇಂದ್ರದ ಸಿಬ್ಬಂದಿ ಎಂದು ಪರಿಚಿಯಿಸಿಕೊಂಡ. ಬಳಿಕ ನಿಮ್ಮ ಕ್ರೆಡಿಟ್‌ (ಎಟಿಎಂ) ಕಾರ್ಡ್‌ ಅವಧಿ ಮುಗಿದಿದ್ದು, ಅದರ ನವೀಕರಣ ಮಾಡಬೇಕಿದೆ ಎಂದ. ಅಲ್ಲದೆ, ನನ್ನ ಎಟಿಎಂ ಕಾರ್ಡ್‌ ನಂಬರ್‌ ಸಹ ತಿಳಿಸಿ, ಬ್ಯಾಂಕ್‌ ಮಾಹಿತಿಯನ್ನು ಎಸ್‌ಎಂಎಸ್‌ ಕಳುಹಿಸುವಂತೆ ಕೋರಿದ. ಹಾಗೆ ಆತ ಮೊಬೈಲ್‌ ಸಂಖ್ಯೆಯನ್ನು ಕಳುಹಿಸಿದ್ದ ಎಂದು ಡಿಜಿಪಿ ಎ.ಎಂ.ಪ್ರಸಾದ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಈ ಹಂತದಲ್ಲಿ ಅಪರಿಚಿತನ ಮಾತು ನಂಬಿದ ನಾನು, ಆತನ ಸೂಚನೆಯಂತೆ ಬ್ಯಾಂಕ್‌ ವಿವರವನ್ನು ಎಸ್‌ಎಂಎಸ್‌ ಮಾಡಿದೆ. ಇದಾದ ಕೆಲವೇ ನಿಮಿಷದಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ನನ್ನ ಖಾತೆಯಿಂದ ಎರಡು ಬಾರಿ ಒಟ್ಟು 2 ಲಕ್ಷ ಹಣವನ್ನು ಕಿಡಿಗೇಡಿಗಳು ಡ್ರಾ ಮಾಡಿದರು. ಹಣ ಡ್ರಾ ಮಾಡಿದ ಎಸ್‌ಎಂಎಸ್‌ ನೋಡಿದ ತಕ್ಷಣವೇ ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸಿ ನನ್ನ ಖಾತೆಯ ವಹಿವಾಟು ಸ್ಥಗಿತಗೊಳಿಸಿದ್ದೆ. ಮರುದಿನ ಈ ಸಂಬಂಧ ಸಿಐಡಿ ಸೈಬರ್‌ ಕ್ರೈಂ ಠಾಣೆಗೆ ನಾನು ದೂರು ನೀಡಿದೆ. ಅದರಂತೆ ತನಿಖೆ ನಡೆಸುತ್ತಿರುವ ಸಿಬ್ಬಂದಿ, ಆರೋಪಿಗಳ ಪತ್ತೆ ಹಚ್ಚುವ ವಿಶ್ವಾಸವಿದೆ ಎಂದು ಡಿಜಿಪಿ ಹೇಳಿದ್ದಾರೆ.

2015ರಲ್ಲಿ ಅಂದಿನ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಅವರಿಗೆ ಇದೇ ರೀತಿ ಎಟಿಎಂ ಕಾರ್ಡ್‌ ನವೀಕರಣದ ನೆಪದಲ್ಲಿ ಸೈಬರ್‌ ಕಳ್ಳರು 10 ಸಾವಿರ ವಂಚಿಸಿದ್ದರು. ಬಳಿಕ ಈ ಪ್ರಕರಣದ ತನಿಖೆ ನಡೆಸಿದ ಸೈಬರ್‌ ಕ್ರೈಂ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು.