ಆಗಸ್ಟ್‌ ತಿಂಗ್ಳ ಮೂರನೇ ವಾರ ಕೂಡಾ ತುಂಬಾ ಹ್ಯಾಪನಿಂಗ್‌ ವಾರವಾಗಿತ್ತು. ಸಮಾಜ, ರಾಜಕಾರಣ, ದೇಶ- ವಿದೇಶಗಳಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಯ್ತು. ರಾಜ್ಯದಲ್ಲಂತೂ ಈ ವಾರ ಅತೀ ಹೆಚ್ಚು ಸಂಚಲನ ಸೃಷ್ಟಿಸಿದ್ದ ವಾರವಾಗಿತ್ತು. ಬನ್ನಿ ಏನೇನಾಯ್ತು ನೋಡ್ಕೊಂಡು ಬರೋಣ... ಕರ್ನಾಟಕ ಪಲ್ಸ್‌ನಲ್ಲಿ.

1. ಟಾರ್ಗೆಟ್‌ ಧರ್ಮಸ್ಥಳ vs ಪ್ರೊಟೆಕ್ಟ್ ಧರ್ಮಸ್ಥಳ!

ರಾಜ್ಯದಲ್ಲಿ ಈ ವಾರವೂ ಧರ್ಮಸ್ಥಳ ಕೇಸ್‌ ತುಂಬಾ ಸದ್ದು ಮಾಡಿದೆ. 'ಧರ್ಮಸ್ಥಳದ ಜತೆ ನಾವು' ಎಂದು ಘೋಷಿಸಿದ ಬಿಜೆಪಿ ನಾಯಕರು ಶಾಸಕ ಎಸ್‌ಆರ್‌ ವಿಶ್ವನಾಥ್‌ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಕಾರ್‌ ರ್ಯಾಲಿಯನ್ನು ಹಮ್ಮಿಕೊಂಡರು. ಇನ್ನೊಂದು ಕಡೆ ಸದನದಲ್ಲಿಯೂ ಧರ್ಮಸ್ಥಳ ಕೇಸ್‌ ಪ್ರತಿಧ್ವನಿಸಿದ್ದು, ಆಡಳಿತ-ವಿಪಕ್ಷ ಶಾಸಕರ ಬಿಸಿ ಬಿಸಿ ಚರ್ಚೆಗೆ ವಿಧಾನಸಭೆ ಸಾಕ್ಷಿಯಾಯ್ತು. ಡಿಸಿಎಂ ಡಿಕೆಶಿಯವರಂತೂ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿಬಿಟ್ಟರು. ಶಾಸಕರು ಹಾಗೂ ರಾಜಕೀಯ ನಾಯಕರು ಪಕ್ಷಾತೀತವಾಗಿ ಧರ್ಮಸ್ಥಳದ ಬೆನ್ನಿಗೆ ನಿಂತು, ದೂರುದಾರ ಹಾಗೂ ವಿರೋಧಿ ಗುಂಪಿನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು ವಿಶೇಷವಾಗಿತ್ತು. ಈ ನಡುವೆ, ಈಗಾಗಲೇ ಉತ್ಖನನ ಮಾಡಿರುವಾಗ ಸಿಕ್ಕಿರುವ ಕಳೇಬರಗಳ ಎಫ್‌ಎಸ್‌ಎಲ್‌ ವರದಿ ಬರುವವರೆಗೂ ಶವಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

2. ಅನನ್ಯ 'ಕಾಲ್ಪನಿಕ' ಕಥೆ ಕಟ್ಟಿದ ಸುಜಾತಾ ಭಟ್!

ಇದೇ ಧರ್ಮಸ್ಥಳ ಫೈಲ್ಸ್‌ನ ಭಾಗವಾಗಿದ್ದ ಸುಜಾತ ಭಟ್‌- ಅನನ್ಯಾ ಭಟ್‌ ಕೇಸ್‌ ಅಂತೂ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಸುಜಾತ ಭಟ್‌ ಹೇಳಿಕೆಗಳು ಹಾಗೂ ಅನನ್ಯಾ ಭಟ್‌ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಮಾಡಿರುವ ಸರಣಿ ವರದಿಗಳಂತೂ ಸಂಚಲನವನ್ನೇ ಸೃಷ್ಟಿಸಿವೆ. ಸುಜಾತ ಭಟ್‌- ತನ್ನ ಹಾಗೂ ತನ್ನ ಮಗಳ ಬಗ್ಗೆ- ನೀಡಿರುವ ಹೇಳಿಕೆಗಳ ಹಿಂದಿನ ಷಡ್ಯಂತ್ರವನ್ನು ಬಯಲುಮಾಡಿದೆ. ಬಹಳ ಹಿಂದೆ ಮೃತಪಟ್ಟ ವಾಸಂತಿ ಎಂಬಾಕೆಯ ಫೋಟೋವನ್ನು ತನ್ನ ಮಗಳ ಫೋಟೋ ಎಂಬಂತೆ ತೋರಿಸಿದ ಸುಜಾತ ಭಟ್‌ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.

ಕೊನೆಗೆ, ತಾನು ಇತರರ ಒತ್ತಡಗೋಳಗಾಗಿ ಸುಳ್ಳು ಕಥೆ ಸೃಷ್ಟಿಸಿದ್ದೇನೆ ಎಂದು ಸುಜಾತ ಭಟ್ ಒಪ್ಪಿ ಕೊಂಡಿರುವುದು ರಾಜ್ಯದಲ್ಲಿ ಹಲ್ ಚಲ್ ಎಬ್ಬಿಸಿದೆ. ಅತಿ ದೊಡ್ಡ ಬೆಳವಣಿಗೆ ಅಂದ್ರೆ, ಧರ್ಮಸ್ಥಳ ಪ್ರಕರಣದ ದೂರುದಾರ CM ಚಿನ್ನಯ್ಯ ನನ್ನು ಕೂಡ SIT ಅರೆಸ್ಟ್ ಮಾಡಿದೆ. ಮುಂದೆ ಏನೇನಾಗುತ್ತೆ ಕಾದು ನೋಡಬೇಕು. ಇನ್ನೊಂದು ಕಡೆ ಅನಾಮಿಕ ದೂರುದಾರನ ಹೇಳಿಕೆಗಳನ್ನು ಆತನ ಸಹೋದ್ಯೋಗಿ ಹಾಗೂ ಪತ್ನಿಯೇ ಅಲ್ಲಗಳೆದಿದ್ದಾರೆ. ಧರ್ಮಾಧಿಕಾರಿ ಬೆಂಬಲಿಸಿ ಧರ್ಮಸ್ಥಳ ಭಕ್ತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಶುರುಮಾಡಿದ್ದಾರೆ.

3. ಧರ್ಮಾಧಿಕಾರಿ ಡಾ. ಹೆಗ್ಗಡೆ ಫಸ್ಟ್‌ ರಿಯಾಕ್ಷನ್

ಈ ಬೆಳವಣಿಗೆಗಳ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ, 'ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಆರೋಪವು ಆಧಾರರಹಿತ ಮತ್ತು ಸುಳ್ಳು ಎಂದಿದ್ದಾರೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ, 'ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತೇನೆ, ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ. ಸತ್ಯ ಎಲ್ಲರಿಗೂ ತಿಳಿಯಬೇಕು. ಈ ಸಂಬಂಧ ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಬೇಕು, ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

4. ತಿಮರೋಡಿ ಜೈಲುಪಾಲು- ಸಮೀರನಿಗೆ ಬೇಲು!

ಇನ್ನೊಂದು ಕಡೆ ಜಸ್ಟಿಸ್‌ ಫಾರ್‌ ಸೌಜನ್ಯ ಹೋರಾಟದ ಮುಖಂಡ ಮಹೇಶ್‌ ಶೆಟ್ಟಿ ತಿಮರೋಡಿ ಬಿಜೆಪಿ- ಆರೆಸ್ಸೆಸ್‌ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟು ಜೈಲು ಸೇರಿದ್ದಾರೆ. ಈ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಇನ್ನೊಬ್ಬ AI ವೀರ ಸಮೀರ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ.

YouTube video player

5. ಪರಿಶಿಷ್ಟ ಎಡಗೈ ಸಮುದಾಯಗಳಿಗೆ ಒಳಮೀಸಲಾತಿ

ಇದೆಲ್ಲಾ ಧರ್ಮಸ್ಥಳದ ಕಥೆಯಾದ್ರೆ, ಇನ್ನು ರಾಜ್ಯ ರಾಜಕಾರಣದಲ್ಲೂ ಪ್ರಮುಖ ಬೆಳವಣಿಗೆಗಳಾಗಿವೆ. ಪರಿಶಿಷ್ಟ ಎಡಗೈ ಸಮುದಾಯಗಳ ದಶಕಗಳ ಬೇಡಿಕೆ ಹಾಗೂ ಹೋರಾಟ ಸಾಕಾರಗೊಂಡಿದ್ದು ಒಳಮೀಸಲಾತಿ ಹಂಚಿಕೆಯ ಮಹತ್ತರ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ. 101 ಜಾತಿಗಳಿಗೆ ಲಭ್ಯವಿರುವ ಶೇ.17 ಮೀಸಲಾತಿಯನ್ನು ಮೂರು ವರ್ಗಗಳಲ್ಲಿ ನೀಡಲು ತೀರ್ಮಾನಿಸಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್‌ ವರದಿಯನ್ನು ಕೆಲ ಬದಲಾವಣೆಗಳೊಂದಿಗೆ ಅಂಗೀಕರಿಸಿದೆ. ಅದರಂತೆ, ಬಲಗೈ ಸಮುದಾಯಗಳಿಗೆ ಶೇ. 6, ಎಡಗೈ ಸಮುದಾಯಗಳಿಗೆ ಶೇ. 6 ಹಾಗೂ ಅತೀ ಹಿಂದುಳಿದ, ಅಲೆಮಾರಿ ಸೇರಿಸಿ ಸ್ಪ್ರಶ್ಯ ಜಾತಿಗಳಿಗೆ ಶೇ.5 ರಷ್ಟು ಮೀಸಲು ನಿಗದಿಪಡಿಸಿದೆ.

6. ಉಪರಾಷ್ಟ್ರಪತಿ ಚುನಾವಣೆ: ಸಿಪಿ ರಾಧಕೃಷ್ಣನ್ vs ನ್ಯಾ. ಸುದರ್ಶನ್ ರೆಡ್ಡಿ

ಇನ್ನು ರಾಷ್ಟ್ರಮಟ್ಟದ ವಿದ್ಯಮಾನಗಳನ್ನು ನೋಡೋದಾದ್ರೆ, ಉಪರಾಷ್ಟ್ರಪತಿ ಚುನಾವಣೆ ಕಾವುಪಡೆದುಕೊಂಡಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಕೃಷ್ಣನ್ ಕಣಕ್ಕಿಳಿದಿದ್ದರೆ, ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

7. ಮತಗಳ್ಳತನ: ರಾಹುಲ್‌ ಗಾಂಧಿಗೆ ಆಯೋಗ ಕೌಂಟರ್

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾಡಿರುವ 'ಮತಗಳ್ಳತನ' ಆರೋಪ -ಪ್ರತ್ಯಾರೋಪ ಇನ್ನೊಂದು ಹಂತಕ್ಕೆ ತಲುಪಿದೆ. ರಾಹುಲ್‌ ಗಾಂಧಿ ಆರೋಪಗಳನ್ನು ಅಲ್ಲಗಳೆದಿರುವ ಭಾರತೀಯ ಚುನಾವಣಾ ಆಯೋಗ, ಅದನ್ನು ಆಧಾರರಹಿತ ಎಂದು ಹೇಳಿದೆ. ಆರೋಪಗಳಿಗೆ ದಾಖಲೆ ಕೊಡಿ ಅಥವಾ ಕ್ಷಮೆ ಯಾಚಿಸಿ ಎಂದು ಆಯೋಗ ರಾಹುಲ್ ಗಾಂಧಿಯವರನ್ನು ಆಗ್ರಹಿಸಿದೆ.

8. ಮೈಸೂರು ದಸರಾ: ಬಾನು ಮುಷ್ತಾಕ್‌ರಿಂದ ಉದ್ಘಾಟನೆ

ಇನ್ನು ರಾಜಕೀಯೇತರ ಬೆಳವಣಿಗೆಗಳನ್ನು ನೋಡೋದಾದ್ರೆ, ಮೈಸೂರು ದಸರಾಗೆ ಸಿದ್ಧತೆಗಳು ಆರಂಭವಾಗಿವೆ. ಗಜಪಡೆ ರಾಜಬೀದಿಗಳಲ್ಲಿ ತಾಲೀಮು ಆರಂಭಿಸಿದೆ. ಈ ಬಾರಿಯ ದಸರಾವನ್ನು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಉದ್ಘಾಟಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

9. ಭಾರತಕ್ಕೆ ವಾಪಾಸಾದ ಗಗನಯಾತ್ರಿ ಶುಭಾಂಶು ಶುಕ್ಲಾ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾರತಕ್ಕೆ ವಾಪಾಸಾಗಿದ್ದು ಭರ್ಜರಿ ಸ್ವಾಗತ ಸಿಕ್ಕಿದೆ. ಶುಕ್ಲಾ ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಶುಕ್ಲಾ ಭಾರತ ತನ್ನದೇ ಆದ ಭಾರತ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿದೆ, ನಮ್ಮ ನೆಲದಿಂದಲೇ ಒಬ್ಬರು, ನಾವೇ ತಯಾರಿಸಿದ ಕ್ಯಾಪ್ಸುಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ದಿನ ಹತ್ತಿರ ಇದೆ ಎಂದು ಹೇಳಿದರು.

10. ಮನಿ ಗೇಮಿಂಗ್ ನಿಷೇಧ

ಇನ್ನೊಂದು ಪ್ರಮುಖ ಬೆಳವಣಿಗೆಯಂದ್ರೆ, ಆನ್‌ಲೈನ್‌ ಗೇಮ್ ನಿಯಂತ್ರಣ ವಿಧೇಯಕ-2025 ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಹೊಸ ವಿಧೇಯಕದ ಪ್ರಕಾರ ಇನ್ಮುಂದೆ ಹಣವಿಟ್ಟು ಆಡುವ ಎಲ್ಲಾ ಆನ್‌ಲೈನ್‌ ಗೇಮ್‌ಗಳು ನಿಷೇಧಿಸಲ್ಪಟ್ಟಿವೆ. ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ ದಂಡ ಬೀಳಲಿದೆ.

ಇದಾಗಿತ್ತು ಕಳೆದ ವಾರದ ವಿದ್ಯಮಾನಗಳ ಒಂದು ಝಲಕ್. ಮತ್ತಷ್ಟು ಕರ್ನಾಟಕ ಪಲ್ಸ್‌ ಅಪ್ಡೇಟ್ಸ್‌ನೊಂದಿಗೆ ಮುಂದಿನ ವಾರ ಮತ್ತೆ ಸಿಗೋಣ, ಗುಡ್‌ ಬೈ,