ಬೆಂಗಳೂರು[ಸೆ.28]: ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡುವಿನ ಶೀತಲ ಸಮರ ತೀವ್ರಗೊಂಡಿದ್ದು, ಉಭಯ ನಾಯಕರ ತಿಕ್ಕಾಟ ಪರೋಕ್ಷವಾಗಿ ಬಯಲಿಗೆ ಬರತೊಡಗಿದೆ.

ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ವೇಳೆ ತಮ್ಮ ಅಭಿಪ್ರಾಯ ಪಡೆದುಕೊಳ್ಳಲಿಲ್ಲ, ಮಾಹಿತಿಯನ್ನೂ ನೀಡಲಿಲ್ಲ ಎಂಬುದೇ ಯಡಿಯೂರಪ್ಪ ಮತ್ತವರ ಪಾಳೆಯದ ಅಸಮಾಧಾನದ ಮೂಲ. ಅಲ್ಲಿಂದ ಶುರುವಾಗಿರುವ ಅತೃಪ್ತಿಯ ಬೆಳವಣಿಗೆಗಳು ದಿನೇ ದಿನೇ ವಿವಿಧ ಸ್ವರೂಪ ಪಡೆದುಕೊಳ್ಳುತ್ತಿವೆ. ತೆರೆಮರೆಯಲ್ಲಿ ಮೇಲಾಟ ನಡೆದಿದೆ.

ಅದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಯಡಿಯೂರಪ್ಪ ಬೆಂಬಲಿಗರೂ ಆಗಿರುವ ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್‌ ಪಾಟೀಲ್‌ ಅವರು ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಬಹಿರಂಗ ಪತ್ರ ಬರೆದಿರುವುದು. ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಮುಂದೆ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಪ್ರಸ್ತುತಪಡಿಸಿದಂತಿದೆ.

ನಳಿನ್‌ಕುಮಾರ್‌ ಕಟೀಲ್‌ ಅವರು ಯಡಿಯೂರಪ್ಪ ವಿರೋಧಿ ನಡೆ ಅನುಸರಿಸುತ್ತಿರುವುದರ ಹಿಂದೆ ಬೇರೆ ಯಾರದ್ದೋ ಕೈವಾಡವಿದೆ ಎಂಬ ಬಲವಾದ ಅನುಮಾನವನ್ನು ಅವರ ಆಪ್ತರು ಹೊಂದಿದ್ದಾರೆ. ಇಲ್ಲದಿದ್ದರೆ ಕಟೀಲ್‌ ಅವರು ಯಡಿಯೂರಪ್ಪ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿರಲಿಲ್ಲ ಎಂಬ ನಿಲುವಿಗೆ ಬಂದಿದ್ದಾರೆ.

ಕಟೀಲ್‌ ಅವರು ರಾಜ್ಯಾಧ್ಯಕ್ಷರಾದ ಬಳಿಕ ಇದುವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ನಂತರ ಸಚಿವರಾದ ಸಿ.ಟಿ.ರವಿ ಅವರ ಜಾಗಕ್ಕೆ ಯಡಿಯೂರಪ್ಪ ಅವರ ವಿರೋಧಿ ಬಣದೊಂದಿಗೆ ಗುರುತಿಸಿಕೊಂಡಿದ್ದ ಮಹೇಶ್‌ ಟೆಂಗಿನಕಾಯಿ ಅವರನ್ನು ನೇಮಿಸಿದರು. ಮಹೇಶ್‌ ಟೆಂಗಿನಕಾಯಿ ಎನ್ನುವುದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಭವಿಷ್ಯದಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನ ಕೇಳಬಾರದು ಎಂಬ ಲೆಕ್ಕಾಚಾರ ಅಡಗಿತ್ತು ಎನ್ನಲಾಗಿದೆ. ಇದು ಯಡಿಯೂರಪ್ಪ ಅವರಲ್ಲಿ ಬೇಸರ ಮೂಡಿಸಿತ್ತು.

ನಂತರ ಇತ್ತೀಚೆಗೆ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ನೆರವು ಬಾರದಿರುವ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಹೇಳಿದ ಮಾತಿಗೆ ರಾಜ್ಯಾಧ್ಯಕ್ಷ ಕಟೀಲ್‌ ಅವರು ಲಘುವಾದ ಧಾಟಿಯಲ್ಲಿ ಮಾತನಾಡಿದ್ದು ಯಡಿಯೂರಪ್ಪ ಅವರನ್ನು ಕೆರಳಿಸಿದೆ. ಸಂಸದರ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂಬ ಮಾತನ್ನು ಯಡಿಯೂರಪ್ಪ ಹೇಳಿದರೂ ಅದನ್ನು ಪ್ರಮುಖವಾಗಿ ಪರಿಗಣಿಸದ ಕಟೀಲ್‌ ಅವರು ಆಡಿದ್ದಾರೆ ಎನ್ನಲಾದ ಮಾತಿನಿಂದ ಕೆಂಡಾಮಂಡಲವಾಗಿ ಏರಿದ ಧ್ವನಿಯಲ್ಲಿ ಮಾತನಾಡಿದರು. ಒಂದು ಹಂತದಲ್ಲಿ ಟೇಬಲ್‌ ಮೇಲಿದ್ದ ನೀರು ಕುಡಿಯುವ ಗಾಜಿನ ಗ್ಲಾಸ್‌ಗೆ ಯಡಿಯೂರಪ್ಪ ಅವರ ಕೈಬಡಿದ್ದರಿಂದ ದೂರ ಬಿದ್ದು ಒಡೆದು ಹೋಯಿತು ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರು ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ವೇಳೆ ತಮ್ಮ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದಕ್ಕಾಗಿ ಉಪಾಧ್ಯಕ್ಷರಾಗಿದ್ದ ಎಂ.ಬಿ.ಭಾನುಪ್ರಕಾಶ್‌ ಮತ್ತು ನಿರ್ಮಲ್‌ಕುಮಾರ್‌ ಸುರಾನಾ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಿದ್ದರು. ಆದರೆ, ಕಟೀಲ್‌ ಅವರು ಅವರಿಬ್ಬರನ್ನೂ ಈಗ ಅದೇ ಸ್ಥಾನದಲ್ಲಿ ಮರುನಿಯುಕ್ತಿಗೊಳಿಸಿದ್ದು ಯಡಿಯೂರಪ್ಪ ಮತ್ತವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಬಿಎಸ್‌ವೈ VS ಕಟೀಲ್‌

* ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್‌ ಟೆಂಗಿನಕಾಯಿ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಮೂಲಕ ರಾಜ್ಯಾಧ್ಯಕ್ಷ ಕಟೀಲ್‌ ಅವರು ವಿಜಯೇಂದ್ರಗೆ ಅವಕಾಶ ತಪ್ಪಿಸಿದರು ಎಂಬ ಆರೋಪ

* ಪರಿಣಾಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ರೇಣುಕಾಚಾರ್ಯಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿದ ಬಿಎಸ್‌ವೈ

* ಹಿಂದೆ ಬಿಎಸ್‌ವೈ ರಾಜ್ಯಾಧ್ಯಕ್ಷರಾಗಿದ್ದ ವೇಳೆ ವಜಾಗೊಳಿಸಿದ್ದ ಭಾನುಪ್ರಕಾಶ್‌, ಸುರಾನಾ ಅವರಿಗೆ ಮತ್ತೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದ ಕಟೀಲ್‌

* ಪ್ರತಿಯಾಗಿ ಸಂತೋಷ್‌ ಅವರು ಹಿಂದೆ ವಿರೋಧಿಸಿದ್ದ ಪುಟ್ಟಸ್ವಾಮಿಗೆ ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನ, ಶಂಕರಗೌಡ ಪಾಟೀಲ ಅವರಿಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ದಯಪಾಲಿಸಿದ ಬಿಎಸ್‌ವೈ

* ಬಿಎಸ್‌ವೈ ಬೆಂಬಲಿಗರಾಗಿರುವ ಭೀಮಾಶಂಕರ್‌ ಪಾಟೀಲ್‌ ಅವರು ನಳಿನ್‌ಕುಮಾರ್‌ ಕಟೀಲ್‌ ವಿರುದ್ಧ ಬಹಿರಂಗವಾಗಿ ಹರಿಹಾಯ್ದು ಪತ್ರವನ್ನೂ ಬರೆಯುವ ಮೂಲಕ ಎಚ್ಚರಿಕೆ ನೀಡಿದರು