ಬೆಂಗಳೂರು (ಜು.08): ಒಂದು ಕಡೆ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆಗೆ ಮೈತ್ರಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದು ಕಡೆ ರಾಜೀನಾಮೆ ಪತ್ರಗಳು ಹನುಮಂತನ ಬಾಲದಂತೆ ಬೆಳೆಯುತ್ತಿದೆ.

ಬೆಳಗ್ಗೆ ಸಚಿವ ಎಚ್.ನಾಗೇಶ್, ಸಂಜೆ ಸಚಿವ ಆರ್. ಶಂಕರ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತೊಬ್ಬ ಪ್ರಭಾವಿ ನಾಯಕನಾಗಿದ್ದ, ಶಿವಾಜಿನಗರ ಶಾಸಕ ರೋಷನ್ ಬೇಗ್ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಾಳೆ (ಮಂಗಳವಾರ) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಹೇಳಿರುವ ರೋಷನ್ ಬೇಗ್, ಬಿಜೆಪಿ ಸೇರೋದಾಗಿ ಪ್ರಕಟಿಸಿದ್ದಾರೆ, ಎಂದು ANI ವರದಿ ಮಾಡಿದೆ.

ಇದನ್ನೂ ಓದಿ | ಸಾಕಪ್ಪ ಸಾಕು.... ನಾನೂ ಬಂದೆ...! ಬಂಡಾಯ ಶಾಸಕರ ಬೆನ್ನಲ್ಲೇ ಡಿಕೆಶಿಯೂ ಮುಂಬೈಗೆ! 

ಶಾಸಕರ ಸಾಮೂಹಿಕ ರಾಜೀನಾಮೆ ಮೈತ್ರಿಪಕ್ಷಗಳ ನಾಯಕರನ್ನು ಭಾರೀ ಸಂಕಟಕ್ಕೆ ದೂಡಿದ್ದು, ಸರ್ಕಾರ ಪತನವಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಶಾಸಕರ ಮನವೊಲಿಸಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮುಂಬೈಗೆ ತೆರಳಿದ್ದರೆ, ಇತ್ತ ಅಳಿದುಳಿದ ಜೆಡಿಎಸ್ ಶಾಸಕರು ರೆಸಾರ್ಟ್‌ನತ್ತ ಮುಖ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ನಾಯಕರನ್ನು ಟೀಕಿಸಿ, ನರೇಂದ್ರ ಮೋದಿ ಹೊಗಳಲು ಆರಂಭಿಸಿದ್ದ ರೋಷನ್ ಬೇಗ್‌ರನ್ನು ಕಾಂಗ್ರೆಸ್‌ನಿಂದ ಅಮಾನತ್ತು ಮಾಡಲಾಗಿತ್ತು.