ಬೆಂಗಳೂರು[ಜು.16]: ರೋಚಕ ಹಂತ ತಲುಪಿರುವ ರಾಜ್ಯ ರಾಜಕೀಯ ಕದನಕ್ಕೆ ಗುರುವಾರ ತೆರೆ ಬೀಳುವ ಹಿನ್ನೆಲೆಯಲ್ಲಿ ಆಡಳಿತಾರೂಢ ಜೆಡಿಎಸ್‌ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತನ್ನು ನಡೆಸುತ್ತಿರುವ ಮಧ್ಯೆಯೇ ಶಾಸಕರು ರೆಸಾರ್ಟ್‌ ರಾಜಕೀಯಕ್ಕೆ ಬೇಸತ್ತಿದ್ದಾರೆ.

ರಾಜೀನಾಮೆ ನೀಡಿರುವ ಶಾಸಕರು ವಾಪಸ್‌ ಬರುವ ಹಲವು ರೀತಿಯ ಪ್ರಯತ್ನಗಳು ಯಶಸ್ಸು ಕಾಣದಿರುವುದರಿಂದ ತಮ್ಮ ಸರ್ಕಾರ ಉಳಿಯಲಿದೆ ಎಂಬ ನಿರೀಕ್ಷೆಯೂ ಜೆಡಿಎಸ್‌ ಪಾಳೆಯದಲ್ಲಿ ಕ್ಷೀಣಿಸಿದೆ ಎನ್ನಲಾಗಿದೆ.

ಹೀಗಾಗಿ ಅತೃಪ್ತರ ಬಣಕ್ಕೆ ಸೇರುವ ಭೀತಿಯಿಂದ ಕಳೆದ ಒಂದು ವಾರದಿಂದ ದೇವನಹಳ್ಳಿಯ ಪ್ರೆಸ್ಟೀಜ್‌ ಗಾಲ್‌್ಫ ಶೈರ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್‌ ಶಾಸಕರಿಗೆ ರೆಸಾರ್ಟ್‌ ಬೇಸರ ತಂದಿದೆ. ಅಲ್ಲದೇ, ವಿಧಾನಸಭೆಯ ಕಲಾಪ ಎರಡು ದಿನ ಮುಂದೂಡಿರುವ ಹಿನ್ನೆಲೆಯಲ್ಲಿ ಸ್ವಕ್ಷೇತ್ರದತ್ತ ತೆರಳುವ ಅಭಿಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಮುಖಂಡರು ಭಿನ್ನಮತೀಯರನ್ನು ಸೆಳೆಯುವ ಅಂತಿಮ ಕಸರತ್ತು ನಡೆಸುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರು ತಮ್ಮ ಶಾಸಕರ ಮನವೊಲಿಕೆ ಮಾಡುವಲ್ಲಿ ನಿರತರವಾಗಿದ್ದಾರೆ. ಮುಂದಿನ ಎರಡು ದಿನ ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ. ಹೀಗಾಗಿ ಇನ್ನೆರೆಡು ದಿನ ರೆಸಾರ್ಟ್‌ನಲ್ಲಿರುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಮುಗಿಯಲಿರುವ ಕಾರಣ ಸರ್ಕಾರದ ಅಳಿವು-ಉಳಿವಿನ ಸ್ಪಷ್ಟಚಿತ್ರಣ ಹೊರಬೀಳಲಿದೆ. ಬಳಿಕ ಶಾಸಕರು ತಮ್ಮ ಕ್ಷೇತ್ರದತ್ತ ತೆರಳಬಹುದು ಎಂದು ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ರಾಜಕೀಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಗೆ ಅದೃಷ್ಟಒಲಿಯುವ ಲಕ್ಷಣಗಳು ಕಂಡುಬರುತ್ತಿವೆ. ದೋಸ್ತಿ ನಾಯಕರು ಪಟ್ಟಪ್ರಯತ್ನವೆಲ್ಲಾ ವಿಫಲವಾಗುತ್ತಿವೆ. ಪ್ರಭಾವಿ ರಾಜಕಾರಣಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮುಂಬೈಗೆ ತೆರಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಚಿವ ಎಂ.ಟಿ.ಬಿ.ನಾಗರಾಜ್‌ ಕಣ್ಣಾಮುಚ್ಚಾಲೆ ಆಟವಾಡಿ ಮುಂಬೈನ ಅತೃಪ್ತರ ಗುಂಪು ಸೇರಿದ್ದಾರೆ. ಪರಿಣಾಮ ಸರ್ಕಾರ ಉಳಿಸಿಕೊಳ್ಳುವ ಆಶಾಭಾವನೆಯು ಕಮರಿದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಕೈ ಚೆಲ್ಲುವುದು ಉತ್ತಮ ಎಂಬ ಅಭಿಪ್ರಾಯಗಳನ್ನು ಜೆಡಿಎಸ್‌ ಶಾಸಕರಲ್ಲಿ ವ್ಯಕ್ತವಾಗುತ್ತಿದೆ.

ಅಲ್ಲದೇ, ಕಳೆದ ಒಂದು ವಾರದಿಂದ ರೆಸಾರ್ಟ್‌ನಲ್ಲಿಯೇ ತಂಗಿರುವ ಶಾಸಕರಿಗೆ ಅಲ್ಲಿನ ಊಟ-ತಿಂಡಿ ಹೊಂದಿಕೊಳ್ಳುವುದು ಕಷ್ಟವಾಗಿದೆ. ಸ್ವಾತಂತ್ರ್ಯ ಕಟ್ಟಿಹಾಕಿದಂತಾಗಿದೆ. ಅಲ್ಲಿಂದ ಬಿಡುಗಡೆ ಬೇಕಾಗಿದೆ. ಕ್ಷೇತ್ರಗಳಿಗೆ ಹೋಗಿ ವಾರಗಳೇ ಕಳೆದಿವೆ. ಕೆಲವೆಡೆ ಮಳೆಯಾದರೆ, ಇನ್ನು ಕೆಲವು ಕಡೆ ಮಳೆಯಾಗಿಲ್ಲ. ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಿದ್ದರು ಮತ್ತು ಕಾರ್ಯಕರ್ತರ ಕಾರ್ಯ ವೈಖರಿ ಹೇಗೆ ನಡೆಯುತ್ತಿದೆ ಎಂಬುದು ತಿಳಿದುಕೊಳ್ಳದಂತಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ರೆಸಾರ್ಟ್‌ ಸಾಕಾಗಿದೆ. ಮುಖಂಡರಲ್ಲಿಯೂ ಬಿಟ್ಟುಬಿಡುವಂತೆಯೂ ಕೋರಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮುಂದುವರೆಸಲಾಗಿದೆ. ಈಗಾಗಲೇ ಒಂದು ವಾರ ಕಳೆದಿದ್ದು, ಇನ್ನು ಎರಡು ದಿನ ಮಾತ್ರ ಇರುವಂತೆ ಮನವೊಲಿಕೆ ಮಾಡಲಾಗುತ್ತಿದೆ. ಸೋಮವಾರ ರಾತ್ರಿಯೂ ಸಹ ಕೆಲವು ಮುಖಂಡರು ಶಾಸಕರೊಂದಿಗೆ ಮಾತುಕತೆ ನಡೆಸಿ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ಗುರುವಾರ ರೆಸಾರ್ಟ್‌ ರಾಜಕೀಯಕ್ಕೆ ಮುಕ್ತಿ ಸಿಗಲಿದೆ. ಅಲ್ಲಿಯವರೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.