ಚಿಕ್ಕಬಳ್ಳಾಪುರ[ಜು.07] :‘ಬಹುಶಃ ಇದೇ ನನ್ನ ಕೊನೆಯ ಸಭೆಯಾಗಬಹುದು!  -ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದ ಶಾಸಕರ ರಾಜೀನಾಮೆ ಪ್ರಕರಣವನ್ನು ಮೊಬೈಲ್‌ ನೋಡಿ ಖಚಿತಪಡಿಸಿಕೊಂಡ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಚ್‌.ವಿ. ಮಂಜುನಾಥ್‌ ಬಳಿ ಹೇಳಿದ ಮಾತುಗಳಿವು. 

ಗೌರಿಬಿದನೂರು ತಾಲೂಕಿನ ಡಿ. ಪಾಳ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಸಭೆ ಕರೆಯಲಾಗಿತ್ತು. ಸಭೆ ಆರಂಭಕ್ಕೂ ಮುನ್ನವೇ ಮೈತ್ರಿ ಸರ್ಕಾರದ 14 ಮಂದಿ ಶಾಸಕರು ರಾಜಿನಾಮೆ ನೀಡುವ ಕುರಿತು ಹಬ್ಬಿರುವ ಸುದ್ದಿ ಕುರಿತು ಸುದ್ದಿಗಾರರ ಪ್ರಶ್ನಿಸಿದರೆ ಸರ್ಕಾರದ ಉಭಯ ಪಕ್ಷಗಳ ಯಾವುದೇ ಶಾಸಕರು, ರಾಜಿನಾಮೆ ನೀಡುವ ಪ್ರಶ್ನಯೇ ಇಲ್ಲ, ಸರ್ಕಾರ ಸುಭದ್ರವಾಗಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. 

ಆದರೆ ಸಭೆ ಆರಂಭವಾದ ಕೆಲ ಹೊತ್ತಿನಲ್ಲಿಯೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ವಿಧಾನಸಭಾಧ್ಯಕ್ಷರ ಕಚೇರಿಗೆ ಆಗಮಿಸಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಿದ ಸಚಿವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರೊಂದಿಗೆ ಬಹುಶ ಇದೇ ಕೊನೆಯ ಸಭೆಯಾಗಬಹುದು ಎಂದು ನಗುತ್ತಲೇ ಹೇಳಿದರು.