ಮೈಸೂರು[ಜು. 31]   ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದೆ. ಕಳೆದ ಒಂದೂವರೆ ತಿಂಗಳು ಇಡೀ ರಾಜ್ಯ ರಾಜಕೀಯ ಅಸ್ತಿರತೆಯಲ್ಲೇ ಮುಳುಗಿ ಹೋಗಿದ್ದೂ ಆಗಿದೆ. ಇದರ ಪರಿಣಾಮವಾಗಿ ನಾಡಹಬ್ಬ ದಸರಾ ಮಹೋತ್ಸವ ಕಳೆಗುಂದಿದ್ದು, ಉನ್ನತ ಮಟ್ಟದ ಸಮಿತಿ ಸಭೆ ನಡೆಸಲು ಮುಖ್ಯಮಂತ್ರಿಗಳು ಇದುವರೆಗೂ ಆಸಕ್ತಿ ತೋರಿಲ್ಲ. 

ವಿಶ್ವವಿಖ್ಯಾತ ದಸರಾ ಮಹೋತ್ಸವ ಸಮೀಪಿಸುತ್ತಿದೆ. ಪ್ರಸಕ್ತ ಸಾಲಿನ ಜಂಬೂ ಸವಾರಿ ಅಕ್ಟೋಬರ್ 8ರಂದು ನೆರವೇರಲಿದೆ. ಅಂದ್ರೆ, ಇನ್ನೆರಡು ತಿಂಗಳು ಮಾತ್ರ ಬಾಕಿ ಇದೆ. ಆದ್ರೆ ಇದುವರೆಗೂ ರಾಜ್ಯ ಸರ್ಕಾರ ದಸರಾ ಆಯೋಜನೆಯ ಬಗ್ಗೆ ಲಕ್ಷ್ಯವನ್ನೇ ತೋರಿಲ್ಲ.

ಮೈಸೂರು ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ದ್ರೋಣ ಇನ್ನಿಲ್ಲ

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಸಮಿತಿ ಸಭೆ, ಪ್ರತಿ ವರ್ಷವೂ ದಸರಾ ಮಹೋತ್ಸವದ ಮುನ್ನುಡಿ. ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜುಲೈ ಮೊದಲ ವಾರದಲ್ಲೇ ಹೈಪವರ್ ಕಮಿಟಿ ಮೀಟಿಂಗ್ ನಡೆಯಬೇಕಿತ್ತು. ಆದ್ರೆ ಜುಲೈ 1ರಂದು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆಯೇ ಮೈತ್ರಿ ಸರ್ಕಾರದ ಬುಡ ಅಲುಗಾಡಲು ಆರಂಭಿಸಿತು. ನಂತರ ತಿಂಗಳು ಪೂರ್ತಿ ನಡೆದ ರಾಜಕೀಯ ವಿಪ್ಲವದ ಪರಿಣಾಮ ಸರ್ಕಾರವೇ ಬದಲಾಗಿ ಹೋಯ್ತು. ಈ ರಾಜಕೀಯ ಕಿತ್ತಾಟಗಳ ನಡುವೆ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಮಾತ್ರ ನಡೆದಿಲ್ಲ. ಅರಣ್ಯ ಇಲಾಖೆ ಸಿದ್ಧತೆಗಳಲ್ಲಿ ಮಗ್ನವಾಗಿದೆ.
 
ಕಳೆದ ವರ್ಷ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ದ್ರೋಣ ಆನೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಇದರ ನಡುವೆ ಹೆಣ್ಣಾನೆಗಳ ಕೊರತೆ ಇದೆ ಎಂಬುದರ ಬಗ್ಗೆಯೂ ಇಲಾಖೆಯೊಳಗೆ ಚರ್ಚೆಗಳು ನಡೆಯುತ್ತಿವೆ. ಇದುವರೆಗೂ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಶಿಬಿರಗಳಲ್ಲಿ ಇರುವ ಆನೆಗಳನ್ನು ಮಾತ್ರ ದಸರಾಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ಉತ್ತರ ಕರ್ನಾಟಕದಿಂದಲೂ ಆನೆಗಳನ್ನು ಕರೆಸಿಕೊಳ್ಳುವ ಚಿಂತನೆಯೂ ನಡೆದಿದೆ. ಆನೆಗಳು ಎಲ್ಲಿಂದ ಬರುತ್ತವೆ ಎಂಬುದು ಮುಖ್ಯವಲ್ಲ. ಯಾವುದೇ ಕೊರತೆಯಾಗದಂತೆ ದಸರಾ ಆಯೋಜನೆ ಮಾಡುವುದಷ್ಟೇ ನಮ್ಮ ಜವಾಬ್ದಾರಿ ಎನ್ನುತ್ತಾರೆ ಡಿಸಿಎಫ್ ಅಲೆಕ್ಸ್ಯಾಂಡರ್.

ಒಟ್ಟಾರೆ ಕಾಡಿನಿಂದ ನಾಡಿಗೆ ಬಂದು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಆನೆಗಳಿಗೆ ಕನಿಷ್ಠ ಎರಡೂವರೆ ತಿಂಗಳ ಸಮಯ ಬೇಕು. ಅಂದ್ರೆ, ಇಷ್ಟೊತ್ತಿಗಾಗಲೇ ಗಜಪಯಣ ಮುಗಿದಿರಬೇಕಿತ್ತು. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೇ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಕರೆಯಬೇಕಿದೆ. ಗಜಪಯಣಕ್ಕೆ ದಿನಾಂಕ ನಿಗದಿ ಮಾಡಿ ದಸರಾ ಮಹೋತ್ಸವದ ಚಟುವಟಿಕೆಗಳಿಗೆ ಚಾಲನೆ ನೀಡಬೇಕಿದೆ.