ಮೈಸೂರು ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ದ್ರೋಣ ಇನ್ನಿಲ್ಲ
ಮೈಸೂರ ದಸರದಲ್ಲಿ ಪಾಲ್ಗೊಂಡಿದ್ದ ಆನೆ ದ್ರೋಣ ಏಕಾ ಏಕಿ ಮೃತಪಟ್ಟಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೊಡಗು: ರಾಜ ಗಾಂಭೀರ್ಯದ ನಡಿಗೆಯೊಂದಿಗೆ, ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಜಗತ್ಪ್ರಸಿದ್ಧ ಜಂಬೂ ಸವಾರಿ ಮೆರವಣೆಗೆಯಲ್ಲಿ ಕಳೆದ ವರ್ಷವೂ ಅಂಬಾರಿ ಹೊತ್ತಿದ್ದ ದ್ರೋಣ ದೀಢೀರ್ ಅಸುನೀಗಿದ್ದಾನೆ. ಹೃದಯಾಘಾತದಿಂದ ಅಸುನೀಗಿರಬಹುದೆಂದು ಶಂಕಿಸಲಾಗಿದೆ.
"
ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ದ್ರೋಣನಿದ್ದ. 2014ರಲ್ಲಿ ಸೆರೆ ಹಿಡಿದಿದ್ದ ದ್ರೋಣನಿಗೆ 37 ವರ್ಷ ವಯಸ್ಸಾಗಿತ್ತು. 2017, 2018ರಲ್ಲಿ ದಸರಾ ಮಹೋತ್ಸವದಲ್ಲಿ ದ್ರೋಣ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅಂಬಾರಿಯನ್ನು ಹೊತ್ತು ಸಾಗಿದ್ದ.
ಮತ್ತಿಗೋಡು ಶಿಬಿರದಲ್ಲಿ ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿದ್ದ ದ್ರೋಣ. ನೀರಿನ ತೊಟ್ಟಿ ಬಳಿ ನೀರು ಕುಡಿದು, ದಿಢೀರ್ ಕುಸಿದುಬಿದ್ದು, ಕೊನೆಯುಸಿರೆಳೆದಿದ್ದಾನೆ.
ನಾಗರಹೊಳೆ ಡಿಎಫ್‌ಒ ಹಾಗೂ ಆನೆ ವೈದ್ಯ ಡಾ. ನಾಗರಾಜು ಸ್ಥಳಕ್ಕೆ ತಕ್ಷಣವೇ ಧಾವಿಸಿ, ಆನೆಯ ಆರೋಗ್ಯ ಪರಿಶೀಲಿಸಿದ್ದಾರೆ. ಆದರೆ, ಅಷ್ಟರೊಳಗೆ ಪ್ರಸಿದ್ಧ ಆನೆ ಕೊನೆಯುಸಿರೆಳೆದಾಗಿತ್ತು.