ಬೆಂಗಳೂರು [ಜು.08]: ರಾಜ್ಯ ರಾಜಕೀಯದಲ್ಲಾಗಿರುವ ಬೆಳವಣಿಗೆ ಕುರಿತು ಚರ್ಚೆ ನಡೆಸಲಾಗಿದೆಯೇ ಹೊರತು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. 

ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಉಪಮುಖ್ಯಮಂತ್ರಿ ಆಗುವುದು ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ವಿಚಾರದ ಕುರಿತು ಚರ್ಚೆಗಳು ನಡೆದಿಲ್ಲ. 

ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರ ಮಾತುಕತೆ ನಡೆಸಲಾಗಿದೆ. ಇದು ದೇವರು ಕೊಟ್ಟ ಸರ್ಕಾರ ಆಗಿದ್ದು, ದೇವರು ಎಷ್ಟು ದಿನ ಅಧಿಕಾರ ನಡೆಸಲು ಅವಕಾಶ ನೀಡುತ್ತಾನೆಯೋ ಅಷ್ಟು ದಿನ ಸರ್ಕಾರ ಇರಲಿದೆ. ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನಿರ್ಧಾರವೇ ನಮ್ಮ ನಿರ್ಧಾರ ಎಂದು ಹೇಳಿದರು.