ಕಾಂಗ್ರೆಸ್ ಬಳಿ ಇದೆ ಅತೃಪ್ತರ ವಿರುದ್ಧ ಪ್ರಬಲ ಅಸ್ತ್ರ 

ಕರ್ನಾಟಕ ರಾಜಕೀಯ ಪ್ರಹಸನ ಜೋರಾಗಿದೆ. ಮೈತ್ರಿ ನಾಯಕರು ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದಾರೆ. ಇದೇ ವೇಳೆ ಕೈ ಅತೃಪ್ತರ ವಿರುದ್ಧ ಪ್ರಬಲ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ. ಹಾಗಾದರೆ ಕಾಂಗ್ರೆಸ್ ಬಳಿ ಇರುವ ಆ ಅಸ್ತ್ರವೇನು?

1. ಸುಪ್ರೀಂಕೋರ್ಟ್‌ ತೀರ್ಪು ಶಾಸಕರು ಕಲಾಪಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದಿದೆಯೇ ಹೊರತು ಪಕ್ಷವು ಅವರಿಗೆ ವಿಪ್‌ ಜಾರಿ ಮಾಡದಂತೆ ಪ್ರತಿಬಂಧಿಸುತ್ತಿಲ್ಲ ಎಂಬುದು ಕಾಂಗ್ರೆಸ್‌ ವಾದ. ಹೀಗಾಗಿ ಕಾಂಗ್ರೆಸ್‌ ಅತೃಪ್ತರಿಗೆ ಈಗಾಗಲೇ ಪಕ್ಷ ಜಾರಿ ಮಾಡಿರುವ ವಿಪ್‌ ಅನ್ವಯವಾಗುತ್ತದೆ.

2. ವಿಧಾನಮಂಡಲ ಆರಂಭವಾದ ವೇಳೆ ನೀಡಿರುವ ವಿಪ್‌ ಅನ್ನು ಅತೃಪ್ತರು ಉಲ್ಲಂಘಿಸಿದರೆ ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ ಅವರನ್ನು ಕೋರಲು ಕಾಂಗ್ರೆಸ್‌ಗೆ ಮತ್ತೊಂದು ಅವಕಾಶವಿದೆ.

3. ಈಗಾಗಲೇ ಅತೃಪ್ತರ ಮೇಲಿರುವ ದೂರು ಹಾಗೂ ವಿಪ್‌ ಉಲ್ಲಂಘನೆ ಎರಡೂ ಸೇರಿ ಅತೃಪ್ತರನ್ನು ಅನರ್ಹಗೊಳಿಸುವ ಪ್ರಬಲ ಅಸ್ತ್ರವಾಗುತ್ತದೆ.

4. ವಿಪ್‌ ಮಾತ್ರವಲ್ಲದೆ ಮೈತ್ರಿ ಕೂಟವು ಅತೃಪ್ತರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆಧಾರದ ಮೇಲೂ ಅನರ್ಹಗೊಳಿಸುವಂತೆ ಈಗಾಗಲೇ ಸ್ಪೀಕರ್‌ ಅವರಿಗೆ ದೂರು ನೀಡಿದೆ.

5. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಂದರೆ ಅತೃಪ್ತರೆಲ್ಲ ಗುಂಪುಗೂಡಿ ರಾಜೀನಾಮೆ ಸಲ್ಲಿಸಿದ್ದು, ಅನಂತರ ಬಿಜೆಪಿ ಶಾಸಕರೊಂದಿಗೆ ಕಾಣಿಸಿಕೊಂಡಿದ್ದು, ಎಲ್ಲ ಒಗ್ಗೂಡಿ ಮುಂಬೈಗೆ ಹೋಗಿದ್ದು, ಮುಂಬೈನಲ್ಲಿ ಬಿಜೆಪಿ ಶಾಸಕರು ಹಾಗೂ ನಾಯಕರ ಕಣ್ಗಾವಲಿನಲ್ಲಿ ಇದ್ದದ್ದು ಸೇರಿದಂತೆ ಹಲವು ದಾಖಲೆಗಳನ್ನು ಕಾಂಗ್ರೆಸ್‌ ನಾಯಕರ ನಿಯೋಗ ಬುಧವಾರ ಸ್ಪೀಕರ್‌ ಅವರಿಗೆ ಒದಗಿಸಿದೆ.

6. ತನ್ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅತೃಪ್ತರನ್ನು ಅನರ್ಹಗೊಳಿಸವಂತೆ ಸ್ಪೀಕರ್‌ ಅವರನ್ನು ಕೋರಿದೆ.