ಬೆಂಗಳೂರು [ಜು.19] :  ವಿಶ್ವಾಸಮತ ಸಾಬೀತುಪಡಿಸಿ ಸರ್ಕಾರ ಉಳಿಸಿಕೊಳ್ಳುವ ಹರಸಾಹಸ ಪಡುತ್ತಿರುವ ಮೈತ್ರಿ ಸರ್ಕಾರದ ಪಕ್ಷಗಳ ನಾಯಕರು ಗುರುವಾರ ತಮ್ಮ ಶಾಸಕರು ಕೈತಪ್ಪಿ ಹೋಗದಂತೆ ಸಾಕಷ್ಟು ನಿಗಾ ವಹಿಸಿದ್ದರು.

ತಮ್ಮ ಜೊತೆಯಲ್ಲೇ ಇದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಬುಧವಾರದ ರಾತ್ರಿ ಇದ್ದಕ್ಕಿದ್ದಂತೆ ಕೈ ತಪ್ಪಿಹೋದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಕಾಂಗ್ರೆಸ್‌ ನಾಯಕರು ಇನ್ಯಾವುದೇ ಶಾಸಕರು ಕೈ ತಪ್ಪಿಹೋಗದಂತೆ ನೋಡಿಕೊಳ್ಳಲು ಅನುಮಾನವಿರುವ ಶಾಸಕರ ಚಲನವಲನಗಳ ಮೇಲೆ ನಿಗಾ ಇಡಲು ಗೌಪ್ಯವಾಗಿ ಕೆಲವರನ್ನು ನಿಯೋಜಿಸಿದ್ದರು. ಯಾವುದೇ ಶಾಸಕರು ಸದನದಿಂದ ಎದ್ದು ಮೊಗಸಾಲೆ, ತಿಂಡಿ, ಕಾಫಿ ಊಟಕ್ಕೆ ಹೋದರೂ ಅವರು ವಾಪಸ್‌ ಸದನಕ್ಕೆ ಬರುವವರೆಗೆ ಅವರಿಗೆ ಗೊತ್ತಿಲ್ಲದಂತೆ ವೀಕ್ಷಕರು ಅವರ ಹಿಂದೆಯೇ ಸಾಗುತ್ತಿದ್ದರು.

ಒಂದು ವೇಳೆ, ಒಂದು ವೇಳೆ ಯಾವುದೇ ಶಾಸಕರ ನಡೆಯಲ್ಲಿ ಅನುಮಾನಗಳು ವ್ಯಕ್ತವಾದರೆ ತಕ್ಷಣ ಮಾಹಿತಿ ನೀಡುವಂತಯೂ ನಾಯಕರು ಸೂಚಿಸಿದ್ದರು. ಅದರಂತೆ ವೀಕ್ಷಕರು ನಿಗಾ ವಹಿಸಿದ್ದು ಕಂಡುಬಂತು.

ಮೇಲ್ಮನೆ ಸದಸ್ಯರ ಆಗಮನ:

ಭಾರೀ ಕುತೂಹಲ ಕೆರಳಿದ್ದ ವಿಶ್ವಾಸಮತ ಯಾಚನೆಗೆ ನಿಗದಿಯಾಗಿದ್ದ ಗುರುವಾರದ ಕಲಾಪ ವೀಕ್ಷಣೆಗೆ ರಾಜ್ಯಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ, ವಿಧಾನ ಪರಿಷತ್‌ ಸದಸ್ಯರಾದ ಭೋಸರಾಜ್‌, ಬಿಜೆಪಿಯ ನಾರಾಯಣಸ್ವಾಮಿ, ಜೆಡಿಎಸ್‌ನ ರಮೇಶ್‌ಗೌಡ, ಬೋಜೇಗೌಡ ಸೇರಿದಂತೆ ವಿವಿಧ ಗಣ್ಯರು ಆಗಮಿಸಿದ್ದರು.