ಹುಬ್ಬಳ್ಳಿ [ಜು.20] : ಕರ್ನಾಟಕ ರಾಜಕೀಯ ಪ್ರಹಸನ ಮುಂದುವರಿದಿದೆ. ರಾಜ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ಇತಿಹಾಸ ಬರೆಯಲು ಹೊರಟಿದ್ದಾರೆ ಎಂದು ಬಿಜೆಪಿ ಸಂಸದ ಪರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿದ  ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರ ವಿಶ್ವಾಸ ಮತ‌ ಸಾಬೀತಿಗೆ ಐದು ದಿನ ತೆಗೆದುಕೊಂಡಿದೆ. ಇದೊಂದು ದೊಡ್ಡ ದುರಂತ ಎಂದರು. 

ನಾಯಕರು ಕುದುರೆ ವ್ಯಾಪಾರ ಮಾಡುವ ಮುನ್ಸೂಚನೆ ನೀಡಿದ್ದಾರೆ. ಯಾವ ಶಾಸಕರೂ ಖರೀದಿ ಆಗಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರ ವರ್ತನೆ ಆಘಾತಕಾರಿಯಾಗಿದೆ. ಅವರು ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಮೈತ್ರಿ ನಾಯಕರು ಕುದುರೆ ವ್ಯಾಪಾರ ಮಾಡುವ ಮುನ್ಸೂಚನೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ತತ್ವ ಬದ್ಧರಾಗಿ ನಡೆದುಕೊಳ್ಳುತ್ತಾರೆಂದು ಭಾವಿಸಿದ್ದೆ. ಆದರೆ ರಮೇಶ್‌ಕುಮಾರ್ ಕೆಟ್ಟ ರೀತಿಯಿಂದ ವರ್ತಿಸಿದ್ದು ದುರ್ದೈವ. ಬಹುಮತ ಸಾಬೀತಿಗೆ ಎಲ್ಲ ದೃಷ್ಟಿಯಿಂದ ಅವಕಾಶ ಕೊಟ್ಟಿದ್ದಾರೆ.  ಮೈತ್ರಿ ನಾಯಕರು ತಮಗೆ ಬಹುಮತ ಇಲ್ಲದೆ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ಜೋಶಿ ಹೇಳಿದರು. 

ಇನ್ನು ಕೇಂದ್ರ‌ ಸರ್ಕಾರ ಈಗ ಯಾವುದೇ ರೀತಿಯಿಂದ ಮಧ್ಯ ಪ್ರವೇಶ ಮಾಡಲ್ಲ. ನಾವು ಎಲ್ಲವನ್ನೂ ಸೂಕ್ಷ್ಮ ರೀತಿಯಿಂದ ಗಮನಿಸುತ್ತಿದ್ದೇವೆ‌. ಸ್ಪೀಕರ್ ಸೋಮವಾರ ಕೊನೆಯ ದಿನ ಎಂದಿದ್ದಾರೆ, ಅಲ್ಲಿಯವರೆಗೆ ಸಮಾಧಾನದಿಂದ ಕಾಯುವುದು ಸೂಕ್ತ. ಬಿಜೆಪಿ ಯಾವುದೇ ಆಪರೇಷನ್ ಕಮಲ‌ ಮಾಡಿಲ್ಲ.  ಶ್ರೀಮಂತ ಪಾಟೀಲ್ ಸೇರಿದಂತೆ ಅವರ ಶಾಸಕರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.  ಶಾಸಕರನ್ನು, ಸಂಸದರನ್ನು ಅಪಹರಿಸುವುದು ಈಗ ಸಾಧ್ಯವಿಲ್ಲ ಎಂದು ಜೋಶಿ ಹೇಳಿದರು. 

ಮೈತ್ರಿ ನಾಯಕರು ದುಡ್ಡು, ಕಾಸು ಕೊಟ್ಟು ಅತೃಪ್ತ ಶಾಸಕರನ್ನು ವಾಪಸ್ ಕರೆತರಲು ಪ್ರಯತ್ನಿಸುತ್ತಿದ್ದಾರೆ.  ಹೀಗಾಗಿ ವಿಶ್ವಾಸಮತ ಸಾಬೀತಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.