ನವದೆಹಲಿ [ಜು.05] :  ಉತ್ತರ ಕನ್ನಡದಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಹೊಸ ಯೋಜನೆಯೊಂದರ ಪರಿಕಲ್ಪನೆಯನ್ನು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಶೆಖಾವತ್ ಅವರ ಮುಂದೆ ರಾಜ್ಯದ ಸಂಸದರು, ಮಠಾಧೀಶರು ಮತ್ತು ತಂತ್ರಜ್ಞರ ನಿಯೋಗ ಮಂಡಿಸಿದೆ. 

ನಿಯೋಗ ನೀಡಿರುವ ಮಾಹಿತಿ ಪಡೆದಿರುವ ಕೇಂದ್ರ ಸಚಿವರು ಯೋಜನೆಯನ್ನು ಅವಲೋಕಿಸುವ ಭರವಸೆಯನ್ನು ನೀಡಿರುವುದಾಗಿ ಎಂದು ಭೇಟಿಯ ಬಳಿಕ ನಿಯೋಗದ ಸದಸ್ಯರು ಹೇಳಿದ್ದಾರೆ. ನಮ್ಮ ಮನವಿ ಸ್ವೀಕರಿಸಿದ ಕೇಂದ್ರ ಸಚಿವರು ಸಭೆಯಲ್ಲಿದ್ದ ಕೇಂದ್ರ ನೀರು ನಿರ್ವಹಣಾ ಮಂಡಳಿಯ ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿದ್ದಾರೆ ಎಂದು ನಿಯೋಗದಲ್ಲಿದ್ದ ಸಂಗಮೇಶ್ ನಿರಾಣಿ ಹೇಳಿದ್ದಾರೆ.

ಏತ ನೀರಾವರಿ ಬಳಕೆ ಪ್ರಸ್ತಾವ: ಮಾಜಿ ಸಚಿವ ಹಾಗೂ ಶಾಸಕರಾದ ಮುರುಗೇಶ ನಿರಾಣಿ ಅವರ ಎಂಆರ್‌ಎನ್ ನಿರಾಣಿ ಪ್ರತಿಷ್ಠಾನ ಮತ್ತು ಇಎಲ್ ಟೆಕ್ನಾಲಜಿ ಪ್ರೈವೇಟ್ ಲಿ. ತಜ್ಞರು ವರದಿಯನ್ನು ಸಿದ್ಧಪಡಿಸಿದ್ದು ಕಾಳಿ ನದಿಯಿಂದ 25 ಟಿಎಂಸಿ ನೀರನ್ನು ಏತ ನೀರಾವರಿ ತಂತ್ರಜ್ಞಾನವನ್ನು ಬಳಸಿ ಘಟಪ್ರಭ ಮತ್ತು ಮಲಪ್ರಭ ನದಿಗೆ ಹರಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಾಳಿ ನದಿಯಲ್ಲಿ ಸುಮಾರು 400 ಟಿಎಂಸಿ ನೀರು ಹರಿಯುತ್ತದೆ. 

ಇದರಲ್ಲಿ 25 ಟಿಎಂಸಿ ನೀರನ್ನು ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಹಾವೇರಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳ ಕುಡಿಯುವ ನೀರು ಮತ್ತು ನೀರಾವರಿ ಬೇಡಿಕೆಗಳಿಗೆ ಪೂರೈಸುವುದು ಈ ಯೋಜನೆಯ ಆಶಯವಾಗಿದೆ. ಶಾಸಕ ಮುರುಗೇಶ ನಿರಾಣಿ, ಸಂಸದರಾದ ಜಿ.ಎಂ.ಸಿದ್ಧೇಶ್ವರ, ಶಿವಕುಮಾರ ಉದಾಸಿ, ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ, ಪಿ.ಸಿ ಗದ್ದಿಗೌಡರ್, ಶಿವಕುಮಾರ್ ಉದಾಸಿ ಸೇರಿ ಹಲವರು ಆಯೋಗ ದಲ್ಲಿದ್ದರು.