ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ನ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. 

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ನ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

ಜೆಡಿಎಸ್‌ಗೆ ಎರಡು ಸ್ಥಾನಗಳು ಲಭಿಸಿದ್ದು, ಒಂದು ಸ್ಥಾನ ರಾಜ್ಯಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಿ.ಎಂ.ಫಾರೂಕ್‌ಗೆ ನೀಡುವುದು ಖಚಿತವಾಗಿದೆ. ಮತ್ತೊಂದು ಸ್ಥಾನಕ್ಕೆ ಜೆಡಿಎಸ್‌ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ಮತ್ತು ಹಿರಿಯ ಮುಖಂಡ ನಾರಾಯಣ ರಾವ್‌ ನಡುವೆ ಪೈಪೋಟಿ ಶುರುವಾಗಿದೆ. ಈ ಸ್ಥಾನಕ್ಕೆ ಟಿಕೆಟ್‌ ನೀಡುವ ಕುರಿತು ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷಕ್ಕಾಗಿ ದುಡಿದು ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಾದ ಎನ್‌.ಎಚ್‌.ಕೋನರೆಡ್ಡಿ, ವೈ.ಎಸ್‌.ವಿ.ದತ್ತಾ, ಮಧು ಬಂಗಾರಪ್ಪ ಸೇರಿದಂತೆ ಇತರೆ ಕೆಲ ನಾಯಕರ ಹೆಸರುಗಳು ಸಹ ಕೇಳಿ ಬಂದಿವೆ. ಆದರೆ, ಒಬ್ಬರಿಗೆ ಟಿಕೆಟ್‌ ನೀಡಿದರೆ ಮತ್ತೊಬ್ಬರು ಅಸಮಾಧಾನಗೊಳ್ಳುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡದೆ ಅವರಿಗೆ ಪರ್ಯಾಯ ಸ್ಥಾನ-ಮಾನ ಕಲ್ಪಿಸುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.

ಎರಡನೇ ಸ್ಥಾನಕ್ಕಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಂಚಿತ ಹಾಗೂ ಜೆಡಿಎಸ್‌ ಬೆಂಗಳೂರು ಮಹಾನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ಅವರ ಪರವಾಗಿ ತೀವ್ರ ಲಾಬಿ ನಡೆಯುತ್ತಿದೆ. ಚುನಾವಣೆಯಲ್ಲಿ ಟಿಕೆಟ್‌ ತಪ್ಪಿದ್ದರಿಂದ ಅದನ್ನು ಸರಿದೂಗಿಸಲು ಜೆಡಿಎಸ್‌ ವರಿಷ್ಠರು ಪ್ರಕಾಶ್‌ಗೆ ಟಿಕೆಟ್‌ ನೀಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ. ಮನೆ ಮನೆಗೆ ಕುಮಾರಣ್ಣ ಅಭಿಯಾನ ಸೇರಿದಂತೆ ಪಕ್ಷದ ಪರವಾಗಿ ಅವರು ಕೆಲಸ ಮಾಡಿದ್ದು, ಕುಮಾರಸ್ವಾಮಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪ್ರಕಾಶ್‌ ಬಗ್ಗೆ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಇನ್ನು ನಾರಾಯಣ ರಾವ್‌ ಸಹ ಆಕಾಂಕ್ಷಿಯಾಗಿದ್ದಾರೆ. ಇಬ್ಬರು ಸಹ ಪಕ್ಷದ ವರಿಷ್ಠರ ಬಳಿ ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ.

ಜೂ.11ಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆ ದಿನವಾಗಿದೆ. ಜೂ.1ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.4ರಂದು ನಾಮಪತ್ರ ವಾಪಸ್‌ ಪಡೆಯಲು ಕೊನೆ ದಿನ ವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಪರಿಷತ್‌ಗೆ ಜೆಡಿಎಸ್‌ನ ಅಂತಿಮ ಸ್ಪರ್ಧಿಗಳು ಯಾರು ಎಂಬುದು ಬುಧವಾರ ಅಂತಿಮಗೊಳ್ಳಲಿದೆ.