Asianet Suvarna News Asianet Suvarna News

ರಾಜ್ಯದಲ್ಲಿ ನಡೆಯುತ್ತಾ ಮತ್ತೊಂದು ಚುನಾವಣೆ ?

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಇನ್ನೂ ಬಿಸಿ ಬಿಸಿಯಾಘಿರುವಾಗಲೇ ಇದೀಗ ಮತ್ತೊಂದು ಚುನಾವಣೆ ಚರ್ಚೆ ಜೋರಾಗುತ್ತಿದೆ. 

Karnataka May Face Another Election
Author
Bengaluru, First Published May 10, 2019, 7:38 AM IST

ಬೆಂಗಳೂರು :  ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಮಧ್ಯಂತರ ವಿಧಾನಸಭಾ ಚುನಾವಣೆಯ ಸದ್ದು ಕೇಳಿಬರುತ್ತಿದೆ.

ಬಿಜೆಪಿಯವರು ಈಗ ಚುನಾವಣೆಗೆ ಬರಲಿ ನೋಡೋಣ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಮರುದಿನವೇ, ಅವರ ಆಪ್ತರೂ ಆಗಿರುವ ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಮಧ್ಯಂತರ ಚುನಾವಣೆ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಹೇಳಿರುವುದು ಇದಕ್ಕೆ ಪುಷ್ಟಿನೀಡುವಂತಿದೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ ಪಾಳೆಯದಲ್ಲಿ ಕಳೆದ ಹಲವು ದಿನಗಳಿಂದ ಮಿತ್ರ ಪಕ್ಷ ಜೆಡಿಎಸ್‌ ಬಗ್ಗೆ ಅಸಮಾಧಾನದ ಹೊಗೆ ಜೋರಾಗಿಯೇ ಕಾಣುತ್ತಿದೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅನುಕೂಲಕರವಾದ ಸ್ಥಾನಗಳು ಲಭಿಸಿದಲ್ಲಿ ಮಧ್ಯಂತರ ಚುನಾವಣೆಗೆ ಆ ಪಕ್ಷ ಮುಂದಾಗಬಹುದೇನೋ ಎಂಬ ಅನುಮಾನ ಮೂಡತೊಡಗಿದೆ.

ಇದೇ ವೇಳೆ, ಮಧ್ಯಂತರ ವಿಧಾನಸಭಾ ಚುನಾವಣೆ ಎದುರಾದರೆ ಆಗಲಿ ಎಂಬ ಅಭಿಪ್ರಾಯವೇ ಪ್ರತಿಪಕ್ಷ ಬಿಜೆಪಿ ವರಿಷ್ಠರಲ್ಲೂ ಇದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳು ಪರಸ್ಪರ ಕಚ್ಚಾಡಿಕೊಂಡು ಪತನಗೊಂಡಲ್ಲಿ ಆಗ ಪರ್ಯಾಯ ಸರ್ಕಾರ ರಚಿಸಲು ಸುಲಭದ ಮಾರ್ಗ ದೊರೆತರೆ ಸರಿ. ಅದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದಾದಲ್ಲಿ ಮಧ್ಯಂತರ ಚುನಾವಣೆ ನಡೆಯುವುದೇ ಸೂಕ್ತ ಎಂಬ ನಿಲುವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮಧ್ಯಂತರ ಚುನಾವಣೆಯ ಬಗ್ಗೆ ಸಣ್ಣದಾಗಿ ಚರ್ಚೆಯೊಂದು ಆರಂಭವಾಗಿದ್ದು, ಇದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಆಧರಿಸಿ ಸ್ಪಷ್ಟರೂಪ ಪಡೆದುಕೊಳ್ಳುವ ನಿರೀಕ್ಷೆಯಿದೆ.

ಎಚ್‌ಡಿಕೆ ನಡೆ ಮೇಲೆ ನಿಂತಿದೆ- ಚಲುವ:  ಗುರುವಾರ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಗೆ ನಡೆದುಕೊಳ್ಳುತ್ತಾರೆ ಹಾಗೂ ಕಾಂಗ್ರೆಸ್‌ ನಾಯಕರನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಂಬುದರ ಮೇಲೆ ಮಧ್ಯಂತರ ಚುನಾವಣೆ ನಿರ್ಧಾರವಾಗುತ್ತದೆ ಎಂದು ತೀಕ್ಷ$್ಣವಾಗಿ ಹೇಳಿದರು.

ಸರ್ಕಾರ ನಡೆಸುವವರು ಸಹಾಯ ಮಾಡಿದವರ ಬಗ್ಗೆ ಕೃತಜ್ಞತೆ, ಗೌರವ ಇಟ್ಟುಕೊಳ್ಳಬೇಕು. ವಿಶ್ವಾಸಕ್ಕೆ ತೆಗೆದುಕೊಂಡರೆ ಐದು ವರ್ಷವೂ ಕುಮಾರಸ್ವಾಮಿಯವರೇ ಸಿಎಂ ಆಗಿರುತ್ತಾರೆ. ಆದರೆ ಇರುವುದನ್ನು ಕಳೆದುಕೊಂಡು ಚುನಾವಣೆ ಘೋಷಣೆ ಮಾಡಿದರೆ ನಾವೇನು ಮಾಡಲು ಸಾಧ್ಯ? ಎಲ್ಲವೂ ಕುಮಾರಸ್ವಾಮಿ ನಡತೆ ಮೇಲೆ ನಿಂತಿದೆ. ಕಾಂಗ್ರೆಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಮಧ್ಯಂತರ ಚುನಾವಣೆ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದರು. ಇದೇ ವೇಳೆ, ಕಾಂಗ್ರೆಸ್‌ ಮಧ್ಯಂತರ ಚುನಾವಣೆಯ ಕುರಿತು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದರು.

ಕುಮಾರಸ್ವಾಮಿ ಬದಲಿಸಲು ಯಾರೂ ಹೇಳಿಲ್ಲ:  ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂಬುದು ಹಲವು ಶಾಸಕರು, ಮುಖಂಡರ ಅಭಿಮತ. ನಾಳೆ ಬೆಳಗ್ಗೆಯೇ ಕುಮಾರಸ್ವಾಮಿ ಅವರನ್ನು ಬದಲಾಯಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಯಾರೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ಒಬ್ಬ ಒಳ್ಳೆ ನಾಯಕ ಮುಖ್ಯಮಂತ್ರಿ ಆಗಬೇಕು ಎಂಬುದಷ್ಟೇ ನನ್ನ ಅಭಿಪ್ರಾಯ. ಏಕೆಂದರೆ ಎಲ್ಲಾ ವರ್ಗರದವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ನಮಗೆ ಬೇಕು ಎನ್ನುವ ಆಶಯದಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಜಾತ್ಯತೀತವಾಗಿ, ಪಕ್ಷಾತೀತವಾಗಿ ಜನ ಬಯಸಿದ್ದಾರೆ. ಅದನ್ನು ತಪ್ಪು ಎಂದು ಹೇಳಲಾಗದು. ನಾಲ್ಕು ವರ್ಷಕ್ಕೆ ಚುನಾವಣೆಯಾಗಲಿ ಅಥವಾ ಒಂದು ವರ್ಷಕ್ಕೇ ಆಗಲಿ. ಮುಂದೆ ಮುಖ್ಯಮಂತ್ರಿ ಮಾತ್ರ ಸಿದ್ದರಾಮಯ್ಯ ಆಗಲಿ ಎಂದು ಬಯಸಿದರೆ ತಪ್ಪೇನು? ಸಿದ್ದರಾಮಯ್ಯನವರನ್ನು ಎಲ್ಲಾ ಶೋಷಿತ ವರ್ಗದವರೂ ಇಷ್ಟಪಡುತ್ತಾರೆ. ಲಿಂಗಾಯತ, ಒಕ್ಕಲಿಗ ಸಮುದಾಯದಲ್ಲಿ ಕಳೆದ ಚುನಾವಣೆಯಲ್ಲಿ ಸ್ವಲ್ಪ ಅಸಮಾಧಾನ ಇತ್ತು. ಅವರಿಗೂ ಇಂದು ಸಿದ್ದರಾಮಯ್ಯ ಯಾವುದೇ ಜಾತಿ ವಿರೋಧಿಯಲ್ಲ, ಎಲ್ಲಾ ಜಾತಿಗಳ ಬಡವರ ಪರ ಇದ್ದಾರೆ ಎಂಬುದು ಅರ್ಥವಾಗಿದೆ. ಅವರ ಆಡಳಿತದ ಅವಶ್ಯಕತೆ ರಾಜ್ಯಕ್ಕೆ ಇದೆ. ಅದರೆ ಇವತ್ತು ಈ ಸಂಗತಿ ಅಪ್ರಸ್ತುತ ಎಂದರು.

37 ಸ್ಥಾನ ಗೆದ್ದವರು ಸೂಚನೆ ಕೊಡ್ತಾರೆ?

ಒಬ್ಬ ಮುಖ್ಯಮಂತ್ರಿ ಒಂದು ರಾಷ್ಟ್ರೀಯ ಪಕ್ಕಕ್ಕೆ ಸೂಚನೆ ಕೊಡ್ತಾರೆ ಅಂದರೆ ಅರ್ಥ ಏನು? 37 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗಿ, 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ. ನೀವು ಹೀಗೆ ನಡೆದುಕೊಳ್ಳಬೇಕು ಹಾಗೇ ನಡೆದುಕೊಳ್ಳಬೇಕು ಅಂತ ಹೇಳುವ ಅವರು ತಮ್ಮ ನಡವಳಿಕೆ ಮಾತ್ರ ಬದಲಾವಣೆ ಮಾಡಿಕೊಳ್ಳಲ್ಲ. ಯಾವುದೇ ಮೈತ್ರಿ ಸರ್ಕಾರದಲ್ಲಿ ಈ ರೀತಿಯ ನಡವಳಿಕೆ ನಾವು ನೋಡಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಇದೇ ವೇಳೆ ಚಲುವರಾಯಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios