ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್‌ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿರುವುದಕ್ಕೆ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. 

ಬೆಂಗಳೂರು : ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್‌ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಮತ್ತು ಖಂಡನೀಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.

Add Asianetnews Kannada as a Preferred SourcegooglePreferred

ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿ ಉದ್ದೇಶಪೂರಿತ ಅಥವಾ ಸುಳ್ಳು ಮಾಹಿತಿಯಾಗಿದ್ದರೆ ಸ್ಪಷ್ಟನೆ, ವಿವರಣೆ ಕೊಡುವುದು ಕ್ರಮಬದ್ಧವಾದದ್ದು. ಆದರೆ ಸುದ್ದಿ ನೆಪ ಮಾಡಿ ದೂರು ದಾಖಲಿಸಿರುವುದು ದ್ವೇಷದ ನಡವಳಿಕೆಗೆ ಇನ್ನಷ್ಟುಒತ್ತು ನೀಡಿದಂತಾಗಿದೆ. ಈ ಹಿಂದೆಯೂ ಪತ್ರಕರ್ತರ ಮೇಲಿನ ಹಲವು ಪ್ರಕರಣಗಳ ಬಗ್ಗೆ ತಮ್ಮ ಗಮನಕ್ಕೆ ತಂದಾಗ ತಾವು ಸ್ಪಂದಿಸಿ, ಮಾಧ್ಯಮಸ್ನೇಹಿಯಾಗಿ ನಡೆದುಕೊಂಡಿರುವುದನ್ನು ಸಂಘ ಸ್ಮರಿಸುತ್ತದೆ. ವಿಶ್ವವಾಣಿ ಮೇಲೆ ದೂರು ದಾಖಲಿಸಿರುವುದು ತಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಈ ಬಗ್ಗೆ ತಾವು ಮಾಹಿತಿ ತರಿಸಿಕೊಂಡು ಪರಿಶೀಲಿಸಿ ಪ್ರಕರಣ ಅಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷದ, ಕಿಚ್ಚಿನ ನಡೆ ಒಳ್ಳೆಯದಲ್ಲ. ಮಾಧ್ಯಮ ಮತ್ತು ಸರ್ಕಾರದ ನಡುವೆ ಸೌಹಾರ್ದ ವಾತಾವರಣ ಇರಲು ಮುಖ್ಯಮಂತ್ರಿಯಾಗಿ ತಾವು ಪ್ರಜ್ಞಾಪೂರ್ವಕವಾಗಿ ಸಂಯಮದ ಹೆಜ್ಜೆ ಇಡಬೇಕು ಎಂದು ಆಶಿಸುತ್ತೇನೆ. ಕದಡಿದ ವಾತಾವರಣ ತಿಳಿಗೊಳಿಸಲು ತಾವು ಇಚ್ಛಿಸಿದಲ್ಲಿ ಸಂವಾದಕ್ಕೂ ಸಿದ್ಧವಿದ್ದೇವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.