Asianet Suvarna News Asianet Suvarna News

ಟೀವಿ ಕಾರ್ಯಕ್ರಮಗಳ ನಿಯಂತ್ರಣಕ್ಕೆ ಸಮಿತಿ

ಟಿ.ವಿ.ವಾಹಿನಿ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚನೆ ಮಾಡುವಂತೆ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ ನೀಡಿದೆ. 

Karnataka High Court Order to Form Committee For Controloging Tv Programs
Author
Bengaluru, First Published Jul 19, 2019, 8:53 AM IST
  • Facebook
  • Twitter
  • Whatsapp

ಬೆಂಗಳೂರು [ಜು.19]:  ಸುದ್ದಿ ವಾಹಿನಿಗಳು ಸೇರಿದಂತೆ ಖಾಸಗಿ ಟಿ.ವಿ.ವಾಹಿನಿ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚನೆ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ರಾಜ್ಯದಲ್ಲಿ ಈ ಮೇಲ್ವಿಚಾರಣಾ ಸಮಿತಿ ರಚನೆ ಮಾಡಿಲ್ಲ ಎಂದು ಆರೋಪಿಸಿ ಗೀತಾಮಿಶ್ರಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಕೇಂದ್ರ ಸರ್ಕಾರ 2008ರಲ್ಲಿ ಹೊರಡಿಸಿರುವ ಆದೇಶದ ಅನುಸಾರ ಸರ್ಕಾರ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ರಚನೆ ಮಾಡಬೇಕು. ಒಂದು ವೇಳೆ ಈವರೆಗೆ ಸಮಿತಿಗಳನ್ನು ರಚನೆ ಮಾಡದಿದ್ದರೆ, ನ್ಯಾಯಾಲಯದ ಈ ಆದೇಶ ಪ್ರತಿ ದೊರೆತ ಆರು ವಾರಗಳಲ್ಲಿ ಸರ್ಕಾರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚನೆ ಮಾಡಬೇಕು ಎಂದು ನ್ಯಾಯಪೀಠ ಆದೇಶ ಮಾಡಿದೆ.

ಅಲ್ಲದೆ, ಟಿ.ವಿ. ವಾಹಿನಿಗಳಲ್ಲಿ ಆಕ್ಷೇಪಾರ್ಹ ಸುದ್ದಿ ಪ್ರಸಾರವಾದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ದೂರು ಸ್ವೀಕಾರ ಘಟಕ ರಚಿಸಬೇಕು. ಆ ಘಟಕಕ್ಕೆ ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು. ಸಲ್ಲಿಕೆಯಾದ ದೂರುಗಳ ಬಗ್ಗೆ ನೋಡಲ್‌ ಅಧಿಕಾರಿಗಳು ಪ್ರತಿ ತಿಂಗಳು ಚರ್ಚೆ ಮಾಡಬೇಕು. ಸಮಿತಿಗಳನ್ನು ರಚನೆ ಮಾಡಿರುವ ಬಗ್ಗೆ ಜಾಹೀರಾತು ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರರ ಪರ ವಕೀಲ ಜಿ.ಆರ್‌.ಮೋಹನ್‌, ಸುದ್ದಿವಾಹಿನಿಗಳು ಸೇರಿದಂತೆ ಖಾಸಗಿ ಟಿ.ವಿ.ವಾಹಿನಿ ಕಾರ್ಯಕ್ರಮಗಳ ನಿಯಂತ್ರಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು 2008ರ ಫೆ.19ರಂದು ಕೇಂದ್ರ ಸರ್ಕಾರ ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ಸ್‌ ರೆಗ್ಯೂಲೇಷನ್ಸ್‌ ಕಾಯ್ದೆ-1995ರ ಅಡಿಯಲ್ಲಿ ದೇಶದ ಎಲ್ಲ ರಾಜ್ಯಗಳಿಗೆ ನಿರ್ದೇಶಿಸಿದೆ. ಆದರೆ, ರಾಜ್ಯದಲ್ಲಿ ಸಮಿತಿಯನ್ನು ರಚನೆ ಮಾಡಿಲ್ಲ ಎಂದು ತಿಳಿಸಿದರು.

ಧಾರವಾಹಿ ಸೇರಿದಂತೆ ಟಿ.ವಿ.ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ದೃಶ್ಯಗಳು, ಸಿನಿಮಾ ದೃಶ್ಯಗಳು ಅಸಭ್ಯ ಹಾಗೂ ಕೀಳುಮಟ್ಟದಿಂದ ಕೂಡಿರುತ್ತವೆ. ಅವು ಸೆನ್ಸಾರ್‌ಗೊಳಪಡದೇ ಪ್ರಸಾರವಾಗುತ್ತವೆ. ಅವುಗಳ ಮೇಲ್ವಿಚಾರಣೆ ನಡೆಸುತ್ತಿಲ್ಲ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಗೂ ಸಾಮರಸ್ಯ ಕೆಡಿಸುವ ಮಾದರಿಯಲ್ಲಿರುತ್ತವೆ. ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಮೇಲ್ವಿಚಾರಣ ಸಮಿತಿ ರಚನೆ ಮಾಡಲು ಕೋರಿ ಅರ್ಜಿದಾರರ ಸಲ್ಲಿಸಿದ್ದ ಮನವಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯು 2018ರ ಡಿ.4ರಂದು ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಗೆ ರವಾನಿಸಿದ್ದರು. ಈವರೆಗೂ ಅವರಿಂದ ಅರ್ಜಿದಾರರಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ರಾಜ್ಯ ಸರ್ಕಾರ ಕೂಡಾ ಈವರೆಗೂ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿತ್ತು.

Follow Us:
Download App:
  • android
  • ios