ಬೆಂಗಳೂರು[ಮಾ.28]: ಬುಧವಾರದಂದು ಸಿಎಂ ಕುಮಾರಸ್ವಾಮಿ ರಾಜ್ಯದ ಪ್ರಮುಖ ನಾಯಕರ ಮೇಲೆ ಐಟಿ ದಾಳಿ ನಡೆಯುವುದಾಗಿ ಆತಂಕ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಆಪ್ತ ಸಿ. ಎಚ್ ಪುಟ್ಟರಾಜು, ಹಾಸನದಲ್ಲಿ ರೇವಣ್ಣ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಇಷ್ಟೇ ಅಲ್ಲದೇ ರಾಜ್ಯದ ಪ್ರಮುಖ ನಾಯಕರ ಮೇಲೂ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಸದ್ಯ ಈ ದಾಳೀ ಬೆನ್ನಲ್ಲೇ ಕುಮಾರಸ್ವಾಮಿ ತಮ್ಮ ಮಾತಿನಂತೆ ಧರಣಿ ಕೂರುತ್ತಾರಾ ಎಂಬ ಪ್ರಶ್ನೆಯೂ ಎದ್ದಿದೆ.

ಹೌದು ಬುಧವಾರದಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎಚ್. ಡಿ ಕುಮಾರಸ್ವಾಮಿ 'ಕೇಂದ್ರ ಸರ್ಕಾರ ಐಟಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ ತೆರಿಗೆ ಇಲಾಖೆ ಅಧಿಕಾರಿಗಳು ಸರ್ಕಾರದ ಏಜೆಂಟ್​ಗಳಂತೆ ವರ್ತಿಸುತ್ತಿದ್ದಾರೆ. ರಾಜಕಾರಣ ಮಾಡುವುದು ನಮಗೂ ತಿಳಿದಿದೆ. ನನ್ನ ಜೊತೆ ಆತ್ಮೀಯರಾಗಿರುವ ಬಿಜೆಪಿ ನಾಯರೊಬ್ಬರು ಫೋನ್ ಮಾಡಿ ಈ ಮಾಹಿತಿ ನೀಡಿದ್ದಾರೆ. ದಾಳಿ ನಡೆಸಲು ನಾಳೆ ಬೆಳಗ್ಗೆ 5 ಗಂಟೆಗೆ ಮಹೂರ್ತ ಇಟ್ಟಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯ ಮಾಡಿ ನಮ್ಮನ್ನು ಹೆದರಿಸುವ ಯತ್ನ ನಡೆಸುತ್ತಿದ್ದಾರೆ. ಆದರೆ ನಾವು ದರೋಡೆ ಮಾಡಿಲ್ಲ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ’ ಎಂದಿದ್ದರು.

ಆದಾಯ ತೆರಿಗೆ ಇಲಾಖೆಯ ಕರ್ನಾಟಕ- ಗೋವಾ ವಿಭಾಗದ ಮುಖ್ಯಸ್ಥ ಬಿ.ಆರ್‌. ಬಾಲಕೃಷ್ಣನ್‌ ಅವರು 250 ರಿಂದ 300 ಮಂದಿ ಅಧಿಕಾರಿಗಳನ್ನು ಕಲೆ ಹಾಕಿಕೊಂಡು ರಾಜ್ಯದಲ್ಲಿ ಐಟಿ ದಾಳಿಗೆ ಸಿದ್ಧವಾಗಿದ್ದಾರೆ. ರಾಜ್ಯದ ಪೊಲೀಸರ ಸಹಕಾರ ಕೋರಿದರೆ ಸರ್ಕಾರಕ್ಕೆ ಎಲ್ಲಿ ಮಾಹಿತಿ ಸೋರಿಕೆಯಾಗುತ್ತದೆಯೋ ಎಂಬ ಭಯದಿಂದ ಭದ್ರತೆಗಾಗಿ ಸಿಆರ್‌ಪಿಎಫ್‌ನ ನೆರವು ಕೇಳಿದ್ದಾರೆ. ರಾಜ್ಯ, ಹೊರ ರಾಜ್ಯಗಳಿಂದ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಈಗಾಗಲೇ ಏರ್‌ಪೋರ್ಟಿಗೆ ಕರೆಸಿಕೊಂಡಿದ್ದಾರೆ. ಏರ್‌ಪೋರ್ಟ್‌ನಲ್ಲಿ ಈ ಅಧಿಕಾರಿಗಳನ್ನು ಪಿಕ್‌ಅಪ್‌ ಮಾಡಲು 300 ಕ್ಯಾಬ್‌ಗಳನ್ನೂ ಬುಕ್‌ ಮಾಡಲಾಗಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಈ ದಾಳಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಅಭಿಮಾನಿಗಳ ಮೇಲೆ ಆಗಬಹುದು. ಐಟಿ ದಾಳಿಯ ಮಾಹಿತಿಯನ್ನು ಬಿಜೆಪಿಯಲ್ಲಿರುವ ನನ್ನ ಆತ್ಮೀಯ ನಾಯಕರೊಬ್ಬರೇ ಕರೆ ಮಾಡಿ ಮಾಹಿತಿ ನೀಡಿದ್ದಾರೆ .

-ಎಚ್. ಡಿ ಕುಮಾರಸ್ವಾಮಿ

ಇದೇ ಸಂದರ್ಭದಲ್ಲಿ ಮತ್ತೊಂದು ವಿಚಾರವನ್ನು ಉಲ್ಲೇಖಿಸಿದ್ದ ಸಿಎಂ ಐಟಿ ದಾಳಿ ನಡೆದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಯಾವ ರೀತಿ ಹೋರಾಟ ಮಾಡಿದ್ದರೋ, ಅದೇ ರೀತಿ ನಾವು ಕೂಡಾ ಪ್ರತಿಭಟಿಸುತ್ತೇವೆ ಎಂದಿದ್ದರು.

ಇದೀಗ ತಮ್ಮ ಆಪ್ತರ ಮೇಲೆ ನಡೆದಿರುವ ದಾಳಿಯ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಟ್ವೀಟ್ ಪ್ರಧಾನಿ ನರೇಂದ್ರ ಮೋದಿ ಐಟಿ ಇಲಾಖೆ ಮೂಲಕ ನಿಜವಾದ ಸರ್ಜಿಕಲ್ ಸ್ಟ್ರೈಕ್ ಆರಂಭಿಸಿದ್ದರೆ. ಸೇಡಿನ ಆಟದಲ್ಲಿ ಬಾಲಕೃಷ್ಣ ಎಂಬ ಐಟಿ ಅಧಿಕಾರಿಗೆ ಸಾಂವಿಧಾನಿಕ ಹುದ್ದೆ ನೀಡುವ ಮೂಲಕ ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ. ಸರ್ಕಾರಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡುವುದು, ಸರ್ಕಾರಿ ಅಧಿಕಾರಿಗಳ ಮೂಲಕ ಚುನಾವಣಾ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಬೆದರಿಸುವ ತಂತ್ರ ಖಂಡನೀಯ' ಎಂದಿದ್ದಾರೆ 

ಕೋಲ್ಕತ್ತದಲ್ಲಿ ಧರಣಿ ಕುಳಿತಿದ್ದ ದೀದಿ:

ಶಾರದಾ ಚಿಟ್​ಫಂಡ್ ​ ಮತ್ತು ರೋಸ್​ ವ್ಯಾಲಿ ಪಾಂಝಿ  ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕೊಲ್ಕತ್ತಾ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ಅವರ ಮನೆಗೆ ಮುತ್ತಿಗೆ ಹಾಕಿದ್ದ ಸಿಬಿಐ ಅಧಿಕಾರಿಗಳನ್ನು ಕೊಲ್ಕತಾ ಪೊಲೀಸರು ಬಂಧಿಸಲಾಗಿತ್ತು.

ತಮ್ಮ ಗಮನಕ್ಕೆ ತಾರದೆ ಪೊಲೀಸ್​ ಕಮಿಷನರ್​ ಅವರನ್ನು ವಿಚಾರಣೆ ನಡೆಸಲು ಬಂದಿದ್ದ ಸಿಬಿಐ ನಡೆಯ ಬಗ್ಗೆ ಆಕ್ರೋಶ ಹೊರಹಾಕಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದರು. ಈ ಪ್ರತಿಭಟನೆಗೆ ಎಚ್​ಡಿ ದೇವೇಗೌಡ ಸೇರಿ ಅನೇಕರು ಬೆಂಬಲ ಸೂಚಿಸಿದ್ದರು.